ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮದ ನೆನಪಿನ ಸ್ನೇಹ ಪಥ ಸ್ಮರಣ ಸಂಚಿಕೆ ಬಿಡುಗಡೆ

0

ಬುದ್ಧಿ, ಭಾವನೆ ಮತ್ತು ಶರೀರದ ಸಮನ್ವಯವೇ ಮಹಿಳೆ –ಆಶಾ ಬೆಳ್ಳಾರೆ

ಮಹಿಳೆ ಬಹುಮುಖ ಪ್ರತಿಭೆಯ ಪ್ರತೀಕವಾಗಿದ್ದು, ಆಕೆಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರಕೃತಿ ಮತ್ತು ಪುರುಷನನ್ನು ಸಮಾನತೆಯ ದೃಷ್ಟಿಯಿಂದ ಒಪ್ಪಿಕೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಗಂಗಾಧರ ಬೆಳ್ಳಾರೆ ಹೇಳಿದರು. ಅವರು ಜೂ.26ರಂದು ಬೆಳ್ಳಾರೆಯ ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮದ ಸವಿನೆನಪಿಗೆ ಹೊರತರಲಾದ ಸ್ನೇಹ ಪಥ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಧನಾತ್ಮಕ ಚಿಂತನೆಗಳೊಂದಿಗೆ ಬೆಳೆಸಬೇಕು. ಅವರ ಕನಸುಗಳು, ಭಾವನೆಗಳು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಕೆಲಸ ಪೋಷಕರು ಹಾಗೂ ಸಮಾಜದಿಂದ ಆಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಸ್ಮರಣ ಸಂಚಿಕೆ ಯಶಸ್ಸಿಗೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಸಂಪಾದಕ ಕೊರಗಪ್ಪ ನಾಯ್ಕ ಕುರುoಬುಡೇಲು ಅನಿಸಿಕೆ ವ್ಯಕ್ತಪಡಿಸಿದರು. ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ವನಿತಾ ಸಾರಕೆರೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು ಉಪಸ್ಥಿತರಿದ್ದರು. ಸ್ನೇಹಶ್ರೀ ಮಹಿಳಾ ಮಂಡಲದ ಕೋಶಾಧಿಕಾರಿ ಕುಸುಮ ಕುರುoಬುಡೇಲು ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಕುರುಂಬುಡೇಲು ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರ್ವಹಿಸಿದರು.