ಆ.9:ಅರೆಭಾಷೆ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ ಆಶ್ರಯದಲ್ಲಿ ಆಟಿ ನೆಂಪು 2026

0

ಆಟಿ ನೆಂಪಿನಲ್ಲಿ ವಿವಿಧ ಸ್ಪರ್ಧೆಗಳು – ಚಿತ್ರಕಲೆ ಸ್ಪರ್ಧೆ ಸುಳ್ಯ ವಿಧಾನಸಭಾ ಕ್ಷೇತ್ರದವರಿಗೆ – ಉಳಿದ ಸ್ಪರ್ಧೆಗೆ ಮುಕ್ತ ಅವಕಾಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಸಹಕಾರದಲ್ಲಿ ಆಟಿ ತಿಂಗಳಿನ ಮಹತ್ವ ಮತ್ತು ನಮ್ಮ ಪೂರ್ವಜರು ಆಟಿ ತಿಂಗಳಿನಲ್ಲಿ ಆಚರಿಸುತ್ತಿದ್ದ ಆಚರಣೆಗಳು ಮತ್ತು ಸೇವಿಸುತ್ತಿದ್ದ ಆಹಾರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ನೀಡುವಂತ ಆಟಿ ನೆಂಪು-2026 ಕಾರ್ಯಕ್ರಮವು ಆಗಸ್ಟ್ 09 ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.

ಆ.1ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ನೆರವೇರಿಸಲಿದ್ದಾರೆ. ಬಳಿಕ ಸ್ಪರ್ಧೆಗಳು ನಡೆಯುವುದು.

ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಲಿದ್ದಾರೆ. ಸಾಹಿತಿ ಮತ್ತು ಕಲಾವಿದರಾದ ಕೊಡಗಿನ ಶ್ರೀಮತಿ ಮಿಲನ ಭರತ್ ಇವರು ಮುಖ್ಯ ಭಾಷಣ ಮಾಡಲಿದ್ದಾರೆ. ಸರಣಿ ತರಬೇತಿ ಮತ್ತು ಇತರ ತರಬೇತಿ ವಿಭಾಗ, ವಲಯ 15, ಜೇಸಿಐ ಭಾರತ ಇದರ ವಲಯ ಸಂಯೋಜಕರಾದ ಜೇಸಿ ಭಾಗ್ಗೇಶ್ ರೈ, ಲಯನ್ಸ್ ಜಿಲ್ಲಾ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಲ. ಜಯರಾಮ್ ದೇರಪ್ಪಜ್ಜನಮನೆ, ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಪಂಜ ಇದರ ವ್ಯವಸ್ಥಾಪನಾ ಸಮಿತಿ ಸಮಿತಿ ಸದಸ್ಯರಾದ ಮಹೇಶ್‌ ಕುಮಾರ್ ಕರಿಕ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆಟಿ ನೆಂಪು ಕಾರ್ಯಕ್ರಮದ ಅಂಗವಾಗಿ ವಾಟ್ಸಾಪ್‌ನಲ್ಲಿ ಅರೆಭಾಷೆ ಸ್ವರಚಿತ ಕವನ ಸ್ಪರ್ಧೆ, ಚಿನ್ನೆಮಣೆ ಸ್ಪರ್ಧೆ, ಅರೆಭಾಷೆ ಪ್ರಹಸನ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ, ನೀರ್ ದೋಸೆ ಹೊಯ್ಯುವ ಸ್ಪರ್ಧೆ ಮತ್ತು ಹಸಿ ತರಕಾರಿಗಳ ಆಲಂಕಾರಿಕವಾಗಿ ಜೋಡಿಸುವ ಸ್ಪರ್ಧೆಗಳು ನಡೆಯಲಿದೆ.

ಸಂಜೆ 6.30 ಗಂಟೆಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ಲೋಕೇಶ್ ಊರುಬೈಲ್‌ರವರ ನಿರ್ದೇಶನದ ಹೆಸರಾಂತ ‘ಅಪ್ಪ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದವರು ವಿವರ ನೀಡಿದರು.

ಕಾರ್ಯಕ್ರಮ ಸಂಘಟಕರಾದ ಸೋಮಶೇಖರ ನೇರಳ “ಚಿತ್ರಕಲೆ ಸ್ಪರ್ಧೆ 4 ವಿಭಾಗದಲ್ಲಿ ನಡೆಯಲಿದ್ದು ಅದರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಉಳಿದ ಎಲ್ಲ ಸ್ಪರ್ಧೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು‌ ವಿವರ‌ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ, ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ಉಪಸ್ಥಿತರಿದ್ದರು.