ಡಾ. ಮಹೇಶ್ ಕೆ.ಕೆ.ಗೆ ಸಂಶೋಧನಾ ಅನುದಾನ ಮಂಜೂರು

0


ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯಲ್ಲಿಯ ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಸುಳ್ಯದ ಡಾ. ಮಹೇಶ್ ಕೆ.ಕೆ. ಯವರಿಗೆ ನವ ದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE) 25 ಲಕ್ಷ ರೂ. ಮೊತ್ತದ ಸಂಶೋಧನಾ ಅನುದಾನವು ದೊರೆತಿದೆ. ಪ್ರಸ್ತುತ ಅನುದಾನವು ಇವರು ಎಐಸಿಟಿಇಯ ರಿಸರ್ಚ್ ಪ್ರೊಮೋಷನ್ ಸ್ಕೀಮ್‌ಗೆ (RPS) ಸಲ್ಲಿಸಲಾದ ಸೂಪರ್‌ಎಲಾಸ್ಟಿಸಿಟಿ ವಿಷಯ ಕುರಿತಾದ ಸಂಶೋಧನಾ ಪ್ರಸ್ತಾವನೆಗೆ ಲಭಿಸಿರುತ್ತದೆ. ಎಐಸಿಟಿಇ ಅನುಮೋದಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಯೋಗಾಲಯದಿಂದ ಮಾರುಕಟ್ಟೆಗೆ ಎಂಬ ಆಶಯದೊಂದಿಗೆ ನವೀನ ಸಂಶೋಧನಾ ಯೋಜನೆಗಳಿಗೆ ಆರ್ಥಿಕ ಬೆಂಬಲ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್.ಪಿ.ಎಸ್. ರೂಪಿಸಲಾಗಿದೆ.


ಹಿಂದಿನ ವರ್ಷ ಡಾ. ಮಹೇಶ್‌ರವರಿಗೆ ಕರ್ನಾಟಕ ಸರಕಾರದ ವಿಷನ್ ಗ್ರೂಪ್‌ನ ಮೂಲಕ 20 ಲಕ್ಷ ರೂ. ಮೊತ್ತದ ಸಂಶೋಧನಾ ಅನುದಾನವು ಮಂಜೂರಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಒಟ್ಟು 45 ಲಕ್ಷ ರೂ. ಮೊತ್ತದ ಸಂಶೋಧನಾ ಅನುದಾನಗಳು ಇವರ ಮೂಲಕ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜ್‌ಗೆ ಲಭಿಸಿದ್ದು ಕಾಲೇಜಿನ ಸಂಶೋಧನಾ ಬಲವರ್ಧನೆಗೆ ಹೆಚ್ಚು ಸಹಕಾರಿಯಾಗಲಿದೆ.

ಇವರು ಅರಂತೋಡು ಗ್ರಾಮದ ಕರಿಂಬಿ ಮನೆಯವರು. ಸುಳ್ಯದ ಬೀರಮಂಗಲದಲ್ಲಿ ವಾಸವಾಗಿದ್ದಾರೆ. ಇವರ ತಂದೆ ದಿ. ಕೂಸಪ್ಪ ಗೌಡ ಕರಿಂಬಿ (ಮಾಜಿ ಆರಕ್ಷಕ ಉಪ ನಿರೀಕ್ಷಕರು) ಹಾಗೂ ತಾಯಿ ಶ್ರೀಮತಿ ತಿರುಮಲೇಶ್ವರಿ ಕೆ.ಕೆ. ಇವರ ಪತ್ನಿ ಡಾ. ಕವಿತ ಮಹೇಶ್ ಮಣಿಪಾಲ ಮಾಹೆ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.