













ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪ್ಲಾಸ್ಟಿಕ್ ಧ್ವಜ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರಧ್ವಜವು ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ಆತ್ಮ ಸಮ್ಮಾನ ಮತ್ತು ರಾಷ್ಟ್ರೀಯತೆಯ ಗುರುತಾಗಿದೆ. ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ ೨೬ರ ಗಣರಾಜ್ಯೋತ್ಸವದಂದು ದೇಶಾದ್ಯಂತ ಅತ್ಯಂತ ಅಭಿಮಾನದಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ ಸಂಜೆ ಅಥವಾ ಮರುದಿನ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಹಾಗೂ ಕಸದ ತೊಟ್ಟಿಗಳಲ್ಲಿ ಕಾಗದ ಮತ್ತು ಪ್ಲಾಸ್ಟಿಕ್ನ ಸಣ್ಣ ಸಣ್ಣ ಧ್ವಜಗಳು ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಈ ಧ್ವಜಗಳು ಜನರ ಕಾಲ್ಕೆಳಗೆ ತುಳಿಯಲ್ಪಟ್ಟು ರಾಷ್ಟ್ರಧ್ವಜಕ್ಕೆ ಘೋರ ಅನಾದರವಾಗುತ್ತಿದ್ದು, ಧ್ವಜದ ಗೌರವಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ದೇಶಭಕ್ತರು ಮತ್ತು ಕ್ರಾಂತಿಕಾರಿಗಳ ತ್ಯಾಗಕ್ಕೆ ಎಸಗುವ ಅಪಚಾರವಾಗಿದೆ. ಇದಲ್ಲದೆ, ‘ತ್ರಿವರ್ಣ ಮಾಸ್ಕ್’ಗಳನ್ನು ಧರಿಸುವುದು ಅಥವಾ ಮಾರಾಟ ಮಾಡುವುದು ಧ್ವಜ ಸಂಹಿತೆಯ ಪ್ರಕಾರ ಅಪರಾಧವಾಗಿದೆ .
ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿದ್ದು, ಕೇಂದ್ರ ಸರ್ಕಾರವೂ ಪ್ಲಾಸ್ಟಿಕ್ ಧ್ವಜ ನಿಷೇಧಕ್ಕೆ ಕ್ರಮ ಕೈಗೊಂಡಿದೆ. ಅದರಂತೆ, ಪ್ಲಾಸ್ಟಿಕ್ ಧ್ವಜಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ‘ಲಾಂಛನಗಳು ಮತ್ತು ಹೆಸರುಗಳ ಅನುಚಿತ ಬಳಕೆ ತಡೆ ಕಾಯಿದೆ ೧೯೫೦’ ಹಾಗೂ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ ೧೯೧’ರ ಅಡಿಯಲ್ಲಿ ಕಾನೂನುಬಾಹಿರ ಅಪರಾಧವಾಗಿದೆ.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 16 ವರ್ಷಗಳಿಂದ ‘ ರಾಷ್ಟ್ರಧ್ವಜವನ್ನು ಗೌರವಿಸಿ ‘ ಎಂಬ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು ಪ್ಲಾಸ್ಟಿಕ್ ಧ್ವಜ ಮತ್ತು ಮಾಸ್ಕ್ ಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಇದೇ ಮನವಿಯನ್ನು, ಸುಳ್ಯದ ಪೊಲೀಸ್ ವೃತ್ತ ನಿರೀಕ್ಷಕರಿಗೆ, ಬೆಳ್ಳಾರೆ ಆರಕ್ಷಕ ಠಾಣೆಯ ಮುಖ್ಯಸ್ಥ ರಿಗೆ, ತಾಲೂಕು ಶಿಕ್ಷಣಾಧಿಕಾರಿ ಗಳಾದ ವೈ. ಎಸ್. ಹರಗಿ , ಬೆಳ್ಳಾರೆಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಮತ್ತು ಅಯ್ಯನಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಮಿತಿಯ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು .







