ಅರಂತೋಡು ‌ಸರಕಾರಿ‌ ಜಾಗದಿಂದ‌ ಮರ ಕಡಿದು ಸಾಗಾಟ : ಲಾರಿ ಸಹಿತ ನಾಲ್ವರ ವಶ – ಸುಳ್ಯ ಅರಣ್ಯ ಇಲಾಖೆ ಕಾರ್ಯಾಚರಣೆ

0

ಸುಳ್ಯ ವಲಯದ ಆರಂತೋಡು ಶಾಖಾ ವ್ಯಾಪ್ತಿಯ ಅರಂತೋಡು ಗ್ರಾಮದ ಮಲ್ಲಡ್ಕ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಡಿದ 01 ಕಿರಾಲ್‌ಬೋಗಿ ಜಾತಿಯ ಮರವನ್ನು ಅಕ್ರಮವಾಗಿ ಕಡಿದು ದಿಮ್ಮಿಗಳನ್ನು ಸಾಗಾಟ ಮಾಡುತಿದ್ದವರನ್ನು ತಡೆದ ಸುಳ್ಯ ಅರಣ್ಯ ಇಲಾಖೆ ಅಧಿಕಾರಿಗಳು ಮರ, ವಾಹನವನ್ನು ವಶ ಪಡೆದು ಕೇಸು ದಾಖಲಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟದಿಂದ ಮರ್ಕಂಜ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಹೈದಂಗೂರು ಎಂಬಲ್ಲಿ ಆ.26 ರ ರಾತ್ರಿ ಸುಳ್ಯ ವಲಯದ ರಾತ್ರಿ ಗಸ್ತು ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಗಸ್ತು ಮಾಡುವಾಗ ಆ ರಸ್ತೆಯಲ್ಲಿ ಲಾರಿ (ನೋಂದಣಿ ಸಂಖ್ಯೆ: ಕೆಎ 44 ಎ 2650) ಯೊಂದರಲ್ಲಿ ಆಕ್ರಮವಾಗಿ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದು, ಅದನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ 14 ಕಿರಾಲ್‌ಬೋಗಿ ಜಾತಿಯ ದಿಮ್ಮಿಗಳಿರುವುದು ಕಂಡುಬಂತು. ಲಾರಿಯಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಈ ಮರದ ದಿಮ್ಮಿಗಳ ಸಾಗಾಟದ ಅನುಮತಿ ಪತ್ರ ಇಲ್ಲದಿರುವುದು ಕಂಡುಬಂತು. ಇದೊಂದು ಅಕ್ರಮ ಮರ ಕಡಿತಲೆ ಮತ್ತು ಸಾಗಾಟ ಎಂದು ತೀರ್ಮಾನಿಸಿ ಲಾರಿ ಮತ್ತು ಸೊತ್ತುಗಳನ್ನು ಅಮಾನತುಪಡಿಸಿ ಆರೋಪಿಗಳನ್ನು ಬಂಧಿಸಲಾಯಿತು.
ಆಪಾದಿತರಾದ ಯಶವಂತ ಯು.ಜಿ. ಉಳುವಾರು-ಮಲ್ಲಡ್ಕ ಮನೆ ಆರಂತೋಡು ಗ್ರಾಮ, ತರುಣ್ ಯು.ವೈ ಮಲ್ಲಡ್ಕ ಮನೆ ಆರಂತೋಡು ಗ್ರಾಮ, ಲಾರಿಯ ಚಾಲಕ ದೀಕ್ಷಿತ್ ಡಿ ಬಾಲಾಜೆ ಮನೆ ಜಾಲ್ಲೂರು ಗ್ರಾಮ, ಲಾರಿಯ ಮಾಲೀಕ ಗಗನ್ ಕೆ. ಕುಕ್ಕುಜಡ್ಕ ಮನೆ ಅಮರಮುಡೂರು ಗ್ರಾಮ ಇವರನ್ನು ಬಂಧಿಸಿ ಕೇಸು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಸುಳ್ಯ ವಲಯ ಅರಣ್ಯಾಧಿಕಾರಿಯವರಾದ ನಿರಂಜನ ಇವರು ತನಿಖೆಯನ್ನು ಮುಂದುವರಿಸಿರುತ್ತಾರೆ. ಅಮಾನತುಪಡಿಸಿದ ಮರದ ದಿಮ್ಮಿ ಮತ್ತು ಲಾರಿಯ ಒಟ್ಟು ಮೊತ್ತ ರೂ: 8,40,144/. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಉಪವಿಭಾಗ ಸುಳ್ಯ ಇವರ ಮಾರ್ಗದರ್ಶನದಲ್ಲಿ ಸುಳ್ಯ ವಲಯ ಆರಣ್ಯಾಧಿಕಾರಿಗಳಾದ ನಿರಂಜನ, ಆರಂತೋಡು ಶಾಖಾ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ದುರದುಂಡಿ ಹಾಗೂ ಕಾಲಬೈರವ ಗಸ್ತು ಪಡೆಯ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾ‌ರ್, ಗಸ್ತು ಅರಣ್ಯ ಪಾಲಕರಾದ ದೀಪಕ್ ಕೆ.ಎಸ್, ಶಿವಾನಂದ ಬಳಗಾನೂರ ಅರಣ್ಯ ವೀಕ್ಷಕರಾದ ಶ್ರೀ ಅಭಿಲಾಷ್ ಮತ್ತು ವಾಹನ ಚಾಲಕರಾದ ಪುರುಷೋತ್ತಮ ಕೆ.ಎಸ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.