ಕಸ್ತೂರಿರಂಗನ್ ವರದಿ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ

0

ಗುತ್ತಿಗಾರಿನಲ್ಲಿ ವಿಶೇಷ ಗ್ರಾಮಸಭೆಗೆ ನಾಲ್ಕೂರು ಗ್ರಾಮಸ್ಥರಿಂದ ಆಗ್ರಹ

ಕಸ್ತೂರಿರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟಗಳ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಹಿನ್ನೆಲೆಯಲ್ಲಿ *ವಿಶೇಷ ಗ್ರಾಮಸಭೆ ಕರೆಯುವಂತೆ ನಾಲ್ಕೂರು ಗ್ರಾಮದ ನಾಗರಿಕರು ಗುತ್ತಿಗಾರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ನಾಗರಿಕರು ಒಗ್ಗೂಡಿ ಸಹಿ ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಕರಡು ಅಧಿಸೂಚನೆಯ ಕುರಿತು ಗ್ರಾಮಸ್ಥರ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು ಗ್ರಾಮಸಭೆಯ ಮೂಲಕ ಅಧಿಕೃತವಾಗಿ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಸ್ಥಳೀಯ ಕೃಷಿಕರು, ತೋಟಗಾರರು ಹಾಗೂ ಗ್ರಾಮಸ್ಥರ ಜೀವನೋಪಾಯ, ವಸತಿ ಮತ್ತು ಮೂಲಭೂತ ಸೌಕರ್ಯಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಗ್ರಾಮ ಮಟ್ಟದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ ಎಂದು ನಾಗರಿಕರು ತಿಳಿಸಿದ್ದಾರೆ.

ಗ್ರಾಮಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ದಾಖಲಿಸಿ, ಗ್ರಾಮಸಭೆಯ ನಿರ್ಣಯದೊಂದಿಗೆ ಸಂಬಂಧಪಟ್ಟ ಸರ್ಕಾರದ ಇಲಾಖೆಗೆ ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.