ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆಯನ್ನು ಸಂಜೆವರೆಗೆ ವಿಸ್ತರಿಸಬೇಕೆಂದು ನ.ಪಂ. ಮಾಜಿ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ರವರು ಅಂಚೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.














ಸುಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಟ್ ಸೇರಿದಂತೆ ವಿವಿಧ ಆಧಾರ್ ಸೇವೆಗಳ ಅಗತ್ಯ ಹೆಚ್ಚಾಗಿದೆ.
ವಿಶೇಷವಾಗಿ ರೇಷನ್ ಕಾರ್ಡ್ ಮೂಲಕ ಅಕ್ಕಿ ಪಡೆಯಲು e-KYC ಮಾಡುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರ e-KYC ಪೂರ್ಣಗೊಳ್ಳದೆ ಇರುವ ಸಮಸ್ಯೆ ಎದುರಾಗುತ್ತಿದೆ. ಇದಲ್ಲದೆ, ಮಕ್ಕಳ ಸ್ಕಾಲರ್ಶಿಪ್ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಅರ್ಜಿಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಸೇವೆಯ ಅಗತ್ಯವಿರುವುದರಿಂದ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ತೊಂದರೆಯಾಗುತ್ತಿದೆ.
ಸುಳ್ಯದಲ್ಲಿ ಪ್ರಸ್ತುತ ಅಂಚೆ ಕಚೇರಿ ಹಾಗೂ ಬ್ಯಾಂಕ್ ಆಫ್ ಬರೋಡಾ ಮುಂತಾದ ಕೆಲವೇ ಕೇಂದ್ರಗಳಲ್ಲಿ ಆಧಾರ್ ಸೇವೆ ಲಭ್ಯವಿರುವುದರಿಂದ, ಈ ಕೇಂದ್ರಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗುತ್ತಿದೆ. ದಿನಕ್ಕೆ ಸೀಮಿತ ಸಂಖ್ಯೆಯಲ್ಲಿ, ಸುಮಾರು 25–30 ಮಂದಿಗೆ ಮಾತ್ರ ಸೇವೆ ಪಡೆಯಲು ಸಾಧ್ಯವಾಗುತ್ತಿರುವುದರಿಂದ, ಅನೇಕ ಸಾರ್ವಜನಿಕರು ಸೇವೆ ಪಡೆಯದೆ ಹಿಂದಿರುಗುವ ಪರಿಸ್ಥಿತಿ ಎದುರಾಗುತ್ತಿದೆ.
ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆಯನ್ನು ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಒದಗಿಸುವಂತೆ ಅಗತ್ಯ ಸಿಬ್ಬಂದಿ ಹಾಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ವಿನಂತಿಸುತ್ತೇನೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.







