“ಒಂದು ವರ್ಷ.. 119 ಕಾರ್ಯಕ್ರಮ…” ಸಾವಿರಾರು ಹೃದಯಗಳ ಜೊತೆ ಬೆಸೆದ ನಾಯಕನ ಪಯಣ…

0

✍️ ಸಂದೀಪ್ ಮಂಚಿಕಟ್ಟೆ

ಇದು ತನ್ನ ತಾಲೂಕನ್ನು ದೇಶವೇ ತಿರುಗಿ ನೋಡುವಂತೆ ಮಾಡಿದ ನಾಯಕನ ಕಥೆ. ಅಲ್ಲಲ್ಲ… ಇದು ಒಬ್ಬ ಮಾದರಿ ನಾಯಕನ ಸತ್ಯದ ಕಥೆ. ಹೌದು, ನಮ್ಮ ಸುಳ್ಯ ತಾಲೂಕಿನಲ್ಲಿ 48 ವರ್ಷಗಳ ಹಿಂದೆ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಆರಂಭವಾಯಿತು. 1978 ರಿಂದ 2025 ರವರೆಗಿನ ಪಯಣ ಒಂದು ಸುಂದರ ಇತಿಹಾಸವಾಗಿದ್ದರೆ, ಸೆಪ್ಟೆಂಬರ್ 2025 ರಿಂದ ಇಲ್ಲಿಯವರೆಗಿನ ಪಯಣ ಆ ಇತಿಹಾಸಕ್ಕೆ ಕಿರೀಟ ತೊಡಿಸಿದ ಸುವರ್ಣ ಅಧ್ಯಾಯವಾಗಿದೆ. ಗ್ರಾಮೀಣ ಭಾಗದಿಂದ ಬೆಳೆದು ಬಂದು ತಮ್ಮ ಕೆಲಸದ ಮೂಲಕ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ.)ನ ಪದಾಧಿಕಾರಿಯಾಗಿ, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ತಮ್ಮ ನಾಯಕತ್ವದ ಮೂಲಕ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ಅಧ್ಯಕ್ಷರಾದವರು ಪವನ್ ಪಲ್ಲತ್ತಡ್ಕ.

ಒಬ್ಬ ನಾಯಕ ನಾವಿಕನಾದಾಗ ಏನೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದಕ್ಕೆ ಪವನ್ ಪಲ್ಲತ್ತಡ್ಕ ಅವರ ಕಳೆದ ಒಂದು ವರ್ಷದ ಆಡಳಿತ ಅವಧಿಯೇ ಸಾಕ್ಷಿ. ತಾಲೂಕಿನ ಅಭಿವೃದ್ಧಿಗೆ ʼಯುವಕ – ಯುವತಿಯರೇ ಜೀವಾಳʼ ಎಂದು ಅರಿತಿದ್ದ ಇವರು, ತಾಲೂಕಿನಾದ್ಯಂತ ಮೌನವಾಗಿದ್ದ 97 ಯುವಕ – ಯುವತಿ ಮಂಡಲಗಳನ್ನು ಸಕ್ರಿಯವಾಗುವಂತೆ ಮಾಡಿದ್ದಷ್ಟೇ ಅಲ್ಲದೆ, ಅಗತ್ಯ ಮಾಹಿತಿಗಳು ಹಾಗೂ ಹೊಸ ಹೊಸ ಯೋಚನೆಗಳನ್ನು ನೀಡುತ್ತ, ಮಾದರಿ ತಾಲೂಕಿನ ಕನಸಿನ ಕಲ್ಪನೆಯನ್ನು ಹುಟ್ಟು ಹಾಕಿದರು.
ತಾಲೂಕಿನಾದ್ಯಂತ ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ, ಧಾರ್ಮಿಕ, ಪರಿಸರ ಹಾಗೂ ಕ್ರೀಡೆಗೆ ಸೇರಿದಂತೆ ಜನರಿಗೆ ಅತ್ಯಗತ್ಯವಾದ ಹಲವು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕೇವಲ ಒಂದು ವರ್ಷದಲ್ಲಿ ದಾಖಲೆಯ 119 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ನಮ್ಮ ಅಧ್ಯಕ್ಷರು.

ಪವನ್ ಅವರ ಅವಧಿಯ ಕೆಲವು ಪ್ರಮುಖ ಕಾರ್ಯಕ್ರಮಗಳು
i) ರಾಜ್ಯಮಟ್ಟದ “ಯುವ ಸಂಭ್ರಮ -2026”
ಇದೇ ವರ್ಷದ ಜನವರಿ 17 ಮತ್ತು 18ರಂದು ಸಂಸ್ಕೃತಿ ಹಾಗೂ ಜನಪದ ಕಲೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಪಂಜದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ “ಯುವ ಸಂಭ್ರಮ- 2026” ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ “ರಾಜ್ಯ ಮಟ್ಟದ ಯುವ ಪ್ರಶಸ್ತಿ “ಹಾಗೂ “ಸಾಂಘಿಕ ಪ್ರಶಸ್ತಿ”ಗಳನ್ನು ನೀಡಿ ಗೌರವಿಸಲಾಯಿತು. ಇದರೊಂದಿಗೆ ಕೃಷಿ ಮೇಳ, ವಾಹನ ಮೇಳ, ವಸ್ತು ಮೇಳ, ಆಹಾರ ಮೇಳ, ವಾಹನ ಸಾಲ ಮೇಳ, ಜಾನುವಾರು ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಸಿದ್ದು, 15 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ii) “ಪಂಚಸಪ್ತತಿ – 2025” 75 ದಿನಗಳ ಸ್ವಚ್ಛತಾ ಅಭಿಯಾನ
2025ರ ಅಕ್ಟೋಬರ್ 10 ರಿಂದ ಡಿಸೆಂಬರ್ 23ರವರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸನ್ಮಾನ್ಯ ನರೇಂದ್ರ ಮೋದಿಯವರ “ಸ್ವಚ್ಛ ಭಾರತ” ಪರಿಕಲ್ಪನೆಯಡಿ ತಾಲೂಕಿನ 28 ಗ್ರಾಮಗಳಲ್ಲಿ ಯುವಕ – ಯುವತಿ ಮಂಡಲಗಳ ಸಹಯೋಗದೊಂದಿಗೆ 75 ದಿನಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

iii) ಯುವಜನರ ವ್ಯಕ್ತಿತ್ವ ವಿಕಸನ ತರಬೇತಿ
“ಯುವಶಕ್ತಿಯೇ ದೇಶದ ಆಸ್ತಿ” ಎಂಬ ಆಶಯದೊಂದಿಗೆ, ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ “ಯುವಾಭ್ಯುದಯ” ಸರಣಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

iv) ಬೃಹತ್ ರಕ್ತದಾನ ಶಿಬಿರಗಳು & ಹೃದಯ ರಕ್ಷಕ್ ತರಬೇತಿ

ರಕ್ತದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಹಲವಾರು ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಯಿತು. ಇದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಿಸುವ “ಹೃದಯ ರಕ್ಷಕ್” (CPR) ತರಬೇತಿಯನ್ನು ಯುವಕ – ಯುವತಿ ಮಂಡಲಗಳ ಸದಸ್ಯರಿಗೆ ಹಾಗೂ ಇತರ ಸಂಘಟನೆಯವರಿಗೂ ನೀಡಲಾಯಿತು.

v) ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ
ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್ ಹಾಗೂ ಕೆಸರುಗದ್ದೆ ಕ್ರೀಡಾಕೂಟ ಸೇರಿದಂತೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

vi) ಸಂಸ್ಕೃತಿ ಮತ್ತು ಜನಪದ ಕಲೆಯ ಉಳಿವು
ಸಂಸ್ಕೃತಿಯ ಉಳಿವು ಹಾಗೂ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜನಪದ ಮತ್ತು ಆಟಿ ಸಂಭ್ರಮಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

vii) ಹಸಿರು ಭವಿಷ್ಯಕ್ಕಾಗಿ – ಪರಿಸರ ಸಂರಕ್ಷಣೆಯತ್ತ ದೃಢ ಹೆಜ್ಜೆ
ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ, ತಾಲೂಕಿನಾದ್ಯಂತ ಹಲವಾರು “ವನಮಹೋತ್ಸವ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿವಿಧೆಡೆ ಸಸಿ ನೆಡುವ ಮೂಲಕ ಹಸಿರು ಪರಿಸರ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

VIII) ವಿದ್ಯಾರ್ಥಿಗಳ ಹಿತಕ್ಕಾಗಿ ಶಿಕ್ಷಣದ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ
ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಯುವಕ-ಯುವತಿ ಮಂಡಲಗಳ ಸಹಕಾರದೊಂದಿಗೆ ತಾಲೂಕಿನ 20 ಸರಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೈಜೋಡಿಸಿ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವುದರ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಅರ್ಥಗರ್ಭಿತ 119 ಕಾರ್ಯಕ್ರಮಗಳ ಪ್ರಮುಖಾಂಶಗಳಷ್ಟೇ ಇವು. ಇವುಗಳಲ್ಲಿ ಹಲವು ಕಾರ್ಯಕ್ರಮಗಳು ರಾಜ್ಯಾದ್ಯಂತ ಸುದ್ದಿಯಾಗಿದ್ದರೆ, ಇನ್ನೂ ಕೆಲವು ಕಾರ್ಯಕ್ರಮಗಳು ನೆರೆಯ ರಾಜ್ಯಗಳವರೆಗೂ ತಲುಪಿ ಗಮನ ಸೆಳೆದಿವೆ. ಇದರ ಜೊತೆಗೆ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಅವರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 10 ಲಕ್ಷ ಅನುದಾನದಲ್ಲಿ ಯುವಜನ ಸಂಯುಕ್ತ ಮಂಡಳಿಯ “ಅನ್ನಪೂರ್ಣ” ಭೋಜನ ಶಾಲೆಯ ವಿಸ್ತೃತ ಕಟ್ಟಡದ ಉದ್ಘಾಟನೆಯೂ ನಡೆಯಿತು. ಹೀಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ಸುಳ್ಯ ತಾಲೂಕಿನಾದ್ಯಂತ ನಿರಂತರವಾಗಿ ನಡೆದಿದೆ.
ಇದೆಲ್ಲದರ ಜೊತೆಗೆ, ಯುವಜನರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಲುವಾಗಿ ಇದೇ ಮೊದಲ ಬಾರಿಗೆ ತಾಲೂಕಿನ ಯುವಕ-ಯುವತಿ ಮಂಡಲಗಳಲ್ಲಿನ ಕ್ರಿಯಾಶೀಲ ಹಾಗೂ ಪ್ರತಿಭಾನ್ವಿತ ಯುವಜನರಲ್ಲಿ ಒಬ್ಬರನ್ನು ಗುರುತಿಸಿ, ಅವರಿಗೆ ‘ಯುವರತ್ನ ಪ್ರಶಸ್ತಿ’ ನೀಡಿ ಗೌರವಿಸುವ ಮಹತ್ವದ ಯೋಜನೆಯನ್ನೂ ರೂಪಿಸಲಾಗಿದೆ.
ತಮ್ಮ ನಾಯಕತ್ವದ ಗುಣಗಳಿಂದ ತಾಲೂಕಿನ ಏಳಿಗೆಗೆ ಹಾಗೂ ಯುವಶಕ್ತಿಯ ಪ್ರೋತ್ಸಾಹಕ್ಕೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಅಧ್ಯಕ್ಷರು, ಸುಳ್ಯದ ಅಭಿವೃದ್ಧಿಗೆ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಿ. ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಸುಳ್ಯ ಒಂದು ಮಾದರಿ ತಾಲೂಕಾಗಿ ಗುರುತಿಸಿಕೊಳ್ಳಲಿ ಎಂಬುದು ನಮ್ಮ ಆಶಯ. ಏಕೆಂದರೆ, ಒಬ್ಬ ಸಮರ್ಥ ನಾಯಕನಿಂದಲೇ ಸಮರ್ಥ ಕಾರ್ಯಗಳು ಸಾಧ್ಯ. ಪವನ್ ಪಲ್ಲತ್ತಡ್ಕ ಅವರ ಸಮಾಜಮುಖಿ ಕಾರ್ಯಗಳು ಇದೇ ಉತ್ಸಾಹದೊಂದಿಗೆ ಮುಂದುವರಿಯಲಿ… ಸುಳ್ಯದ ಅಭಿವೃದ್ಧಿಯ ಪಯಣ ಇನ್ನಷ್ಟು ಎತ್ತರಕ್ಕೆ ಸಾಗಲಿ.

ಸಂದೀಪ್‌ ಅಂಬಿಳಿ ಮಂಚಿಕಟ್ಟೆ
ಸ್ಪೋರ್ಟ್ಸ್ ಪ್ರೊಡ್ಯೂಸರ್, ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್