ಕನಕಮಜಲು : ಮತದಾರರ ಪಟ್ಟಿಗೆ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿ ಹಿಂಪಡೆದ ಬಿಜೆಪಿ ಪಕ್ಷದ ಬಿಎಲ್‌ಎ–2

0

ಮತದಾರರು ಪೋಲೀಸ್ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾಗ ಆಕ್ಷೇಪಣೆ ಹಿಂಪಡೆಯಲು ಬಿ.ಎಲ್.ಎ. ತೀರ್ಮಾನ

ತಪ್ಪು ಮಾಹಿತಿಯಿಂದಾಗಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೆ : ಬಿ.ಎಲ್.ಎ. – 2 ವಿವರಣೆ

ಕನಕಮಜಲಿನ ಎರಡು ವಾರ್ಡಿನಲ್ಲಿ ಒಟ್ಟು 49 ಮತದಾರರ ಮೇಲೆ ಆಕ್ಷೇಪಣಾ ಅರ್ಜಿ

ಸುಳ್ಯ ತಾಲೂಕು ಕನಕಮಜಲು ಗ್ರಾಮದ ಒಂದನೇ ವಾರ್ಡಿನ ಮತದಾರರ ಪಟ್ಟಿಯಲ್ಲಿರುವ 15 ಮಂದಿಯ ಬಗ್ಗೆ ಬಿಜೆಪಿ ಪಕ್ಷದ ಬಿಎಲ್‌ಎ–2 ರವರು
ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ಇಂದು ಹಿಂಪಡೆದುಕೊಂಡಿದ್ದಾರೆ.

ತಾವು ಗ್ರಾಮದ ನಿವಾಸಿಗಳಾಗಿರುವುದನ್ನು ತಿಳಿದೂ ಸುಳ್ಳು ಮಾಹಿತಿ ನೀಡಿ ನಮ್ಮನ್ನು ಮತದಾರರ ಪಟ್ಟಿಯಿಂದ ತೆಗೆಯಲು ಪ್ರಯತ್ನಿಸಿದ್ದಾರೆಂದು ಬಿ.ಎಲ್.ಎ. 2 ಸುನಿಲ್ ರವರ ಮೇಲೆ ಪೋಲೀಸ್ ದೂರು ನೀಡಲು ಮತದಾರರು ಸಿದ್ಧತೆ ನಡೆಸಿರುವುದನ್ನು ತಿಳಿದ ಬಳಿಕ ಆಕ್ಷೇಪಣಾ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಭಾಗ ಸಂಖ್ಯೆ 194 ರ ಮತದಾರರ ಪಟ್ಟಿಯಲ್ಲಿರುವ ಸುಮಾರು 15 ಮುಸ್ಲಿಂ ಮತದಾರರ ಹೆಸರುಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 24 ರಂದು ಬಿಎಲ್ಎ 2 ಸುನಿಲ್ ರವರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.

ಈ ವಿಷಯ ತಿಳಿದ ಸಂಬಂಧಪಟ್ಟ ಮತದಾರರು, ಸುನಿಲ್ ರ ಮೇಲೆ ದೂರು ನೀಡಲು ಕಾಂಗ್ರೆಸ್ಸಿನ ಬಿ.ಎಲ್.ಎ. 2 ಆಗಿರುವ ನ್ಯಾಯವಾದಿ ಫವಾಜ್ ಕನಕಮಜಲು ರವರನ್ನು ಸಂಪರ್ಕಿಸಿದರೆನ್ನಲಾಗಿದೆ. ಈ ವಿಷಯ ತಿಳಿದ ಸುನಿಲ್ ರವರ ಮನೆಯವರು ಪೋಲೀಸ್ ದೂರು ನೀಡುವುದು ಬೇಡ. ಆಕ್ಷೇಪಣಾ ಅರ್ಜಿಯನ್ನು ವಾಪಸ್ ಪಡೆಯಲು ಹೇಳುತ್ತೇವೆ ಎಂದು ಹೇಳಿದ ಮೇರೆಗೆ ಮಾತುಕತೆ ನಡೆದು, ಬಳಿಕ ಇಂದು ಮಧ್ಯಾಹ್ನ ನಂತರ ಸುನಿಲ್ ಅವರು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ಭೇಟಿ ಮಾಡಿ, ” ತಾನು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಮತದಾರರು ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ತನಗೆ ದೊರೆತಿದ್ದ ಮಾಹಿತಿ ತಪ್ಪಾಗಿತ್ತು. ನಾನು ಆಕ್ಷೇಪಣಾ ಅರ್ಜಿಯನ್ನು ವಾಪಸ್ ಪಡೆಯುತ್ತೇನೆ” ಎಂದು ಬರೆದುಕೊಟ್ಟು ಆಕ್ಷೇಪಣೆಯನ್ನು ವಾಪಸ್ ಪಡೆದಿದ್ದಾರೆ.

ಕನಕಮಜಲಿನ ಎರಡನೇ ವಾರ್ಡಿನ ಸುಮಾರು 34 ಮಂದಿ ಮತದಾರರ ಮೇಲೆ ಅಲ್ಲಿಯ ಬಿ.ಜೆ.ಪಿ.ಯ ಬಿ.ಎಲ್.ಎ. 2 ರವರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದ್ದು , ಆ ಬಗ್ಗೆ ಬಿ.ಎಲ್.ಒ. ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.