ಸುಳ್ಯ ವಕೀಲರ ಸಂಘದ ಅಧ್ಯಕ್ಷ ಶ್ರೀಹರಿ ಕುಕ್ಕುಡೇಲು ತಂಡದ ಪದಸ್ವೀಕಾರ ಸಮಾರಂಭ

0

ಸುಳ್ಯ ವಕೀಲರ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಶ್ರೀಹರಿ ಕುಕ್ಕುಡೇಲು, ಪ್ರಧಾನ ಕಾರ್ಯದರ್ಶಿ ಕುಸುಮಾಧರ ಕುತ್ತಿಮುಂಡ ಹಾಗೂ ಕೋಶಾಧಿಕಾರಿ ಶ್ರೀಮತಿ ಪ್ರತಿಭಾ ಜ್ಯೋತಿ ತಂಡದ ಪದ ಸ್ವೀಕಾರ ಸಮಾರಂಭ
ಅ.12ರಂದು ಸುಳ್ಯ ವಕೀಲರ ಭವನದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಸುಳ್ಯ ನ್ಯಾಯಾಧೀಶರಾದ ಶ್ರೀಮತಿ ತಟ್ಟಂಡ ದಮಯಂತಿ ಸೋಮಯ್ಯ ನೆರವೇರಿಸಿ, “ವಕೀಲರ ಸಂಘದ ಅಧ್ಯಕ್ಷತೆ ಎನ್ನುವುದು ಒಂದು ಜವಾಬ್ದಾರಿ. ‌ನ್ಯಾಯಾಲಯದ ಎಲ್ಲ ಕೆಲಸಗಳಲ್ಲಿಯೂ ಉತ್ತಮ ಸಹಕಾರ ನೀಡಿದ್ದೀರಿ. ಸುಳ್ಯಕ್ಕೆ ಹೊಸ ಕೋರ್ಟ್ ಕಾಂಪ್ಲೆಕ್ಸ್ ಆಗುವಲ್ಲಿ ತಮ್ಮ ಸಹಕಾರ ಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ರಿಚಾರ್ಡ್ ಎಂ ಕೋಸ್ತಾ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕೆ., ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೆಣವ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಭಾಗವಹಿಸಿ, ಶುಭಹಾರೈಸಿದರು.

ನೂತನ ಅಧ್ಯಕ್ಷ ಶ್ರೀಹರಿ ಕುಕ್ಕುಡೇಲು ತಂಡಕ್ಕೆ ನಿರ್ಗಮನ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಅಧಿಕಾರ ಹಸ್ತಾಂತರ ಗೈದರು.‌ ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ರೀಹರಿಯವರ “ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸುತ್ತೇವೆ” ಎಂದರು.

ಹಿರಿಯ ವಕೀಲರಾದ ಕೃಷ್ಣಮೂರ್ತಿ ಕಳಂಜ, ಎಂ.ವೆಂಕಪ್ಪ ಗೌಡರು ಶುಭಹಾರೈಸಿದರು.

ಸಂಘದ ಉಪಾಧ್ಯಕ್ಷ ಹರ್ಷಿತ್ ಕಾರ್ಜ, ಜತೆ‌ಕಾರ್ಯದರ್ಶಿ ಶ್ರೀಮತಿ ಸುಮಾ ಕೆ.ಎಸ್., ಕ್ರೀಡಾ ಕಾರ್ಯದರ್ಶಿ ವಿನೋದ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ, ಗ್ರಂಥಾಲಯ ಕಾರ್ಯದರ್ಶಿ ಸಂದೀಪ್‌ ವಳಲಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾ ಕೆ.ಎಸ್. ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಕುಸುಮಾಧರ ಕುತ್ತಿಮುಂಡ ಸ್ವಾಗತಿಸಿದರು. ಚಂಪಾ ವಿ. ಗೌಡ ಕಾರ್ಯಕ್ರಮ ‌ನಿರೂಪಿಸಿದರು.