ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ 1.50 ಕೋಟಿ ವೆಚ್ಚದ ಬೃಹತ್ ಕಟ್ಟಡದ ಕಾಮಗಾರಿ ಅಂತಿಮ ಹಂತಕ್ಕೆ

0

ಕಾಮಗಾರಿಯ ಕುರಿತು ಡಾ. ಕೆ ವಿ ಚಿದಾನಂದ ರವರಿಂದ ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚಾ ಸಭೆ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವದ ಅಂಗವಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ರವರು ಕೊಡುಗೆಯಾಗಿ ನೀಡಲ್ಪಡುವ 1.50 ಕೋಟಿ ವೆಚ್ಚದ ನೂತನ ಕಟ್ಟಡದ ಅಂತಿಮ ಘಟ್ಟದ ಕಾಮಗಾರಿಯು ಬರದಿಂದ ಸಾಗುತ್ತಿದೆ. ಈ ಕುರಿತಂತೆ ಕಟ್ಟಡ ದಾನಿಗಳಾದ ಡಾ. ಕೆ. ವಿ. ಚಿದಾನಂದರ ಅಧ್ಯಕ್ಷತೆಯಲ್ಲಿ ಅ 14 ರಂದು ಕೆ ವಿ ಜಿ ಆಯುರ್ವೇದಿಕ್ ಕಾಲೇಜಿನ ಕಚೇರಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಶಾಲಾ ಆಡಳಿತ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚಾ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಕಾಲೇಜು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.

ನೂತನ ಕಟ್ಟಡದ ಕಾಮಗಾರಿಯ ಕುರಿತು ಮಾತನಾಡಿದ ಡಾ. ಕೆ ವಿ ಚಿದಾನಂದ ರವರು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕೆಲಸ ಕಾರ್ಯಗಳು ಶೇಕಡ 90 ರಷ್ಟು ನಡೆದಿದ್ದು, ಇದೀಗ ಅಂತಿಮ ಘಟ್ಟದತ್ತ ಕೆಲಸ ಕಾರ್ಯಗಳು ನಡೆಯುತ್ತಿದೆ. ಉಳಿದ ಕಾಮಗಾರಿ ಇನ್ನು ಕೇವಲ ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳಲಿದ್ದು ಈ ಕೆಲಸ ಕಾರ್ಯಗಳಿಗೆ ಶಾಲಾ ಆಡಳಿತ ಸಮಿತಿ ವತಿಯಿಂದ ಬೇಕಾಗಿರುವ ಸಹಕಾರವನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ಕೇಳಿಕೊಂಡರು.


ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ನೀಡಿದ ಅವರು ‘ಮೊದಲ ಅಂತಸ್ತಿನಲ್ಲಿ ಹಿರಿಯ ವಿದ್ಯಾರ್ಥಿಗಳ ಕಚೇರಿ ಮತ್ತು ಮೂರು ತರಗತಿ ಕೊಠಡಿಗಳು ಮತ್ತು ಒಂದು ಸ್ಟೋರ್ ರೂಮ್ ಇದ್ದು ಎರಡನೇ ಅಂತಸ್ತಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗಾಗಿ ಸುಮಾರು 60 ಕಂಪ್ಯೂಟರ್ ಗಳು ಇಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮೂರನೆಯ ಅಂತಸ್ತಿನಲ್ಲಿ ಸುಮಾರು 500 ಮಂದಿ ಕುಳಿತು ಕೊಳ್ಳಲು ಸಾಧ್ಯವಿರುವ ವಿಶಾಲವಾದ ಸುಂದರ ಸಭಾಂಗಣ ಮತ್ತು ವೇದಿಕೆ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಾಣವಾಗಲಿದೆ ಎಂದು ಹೇಳಿದರು.ಅಲ್ಲದೆ ಪೂರ್ತಿ ಸಂಸ್ಥೆಗೆ ಬೇಕಾಗಿರುವ ಕುಡಿಯುವ ನೀರಿನ ಯೋಜನೆಗಾಗಿ ಬೃಹತ್ ನೀರಿನ ಟ್ಯಾಂಕಿಯನ್ನು ನಿರ್ಮಿಸಲಾಗಿದ್ದು ಈ ಎಲ್ಲಾ ಕಾಮಗಾರಿಗಳು ಅಂತಿಮ ಘಟ್ಟದಲ್ಲಿ ಬಂದು ತಲುಪಿರುತ್ತದೆ ಎಂದು ಮಾಹಿತಿ ನೀಡಿದರು.

ಉಳಿದಂತೆ ಕಟ್ಟಡಕ್ಕೆ ವಿದ್ಯುತ್ ಸಂಪರ್ಕಕ್ಕೆ ಬೇಕಾಗಿರುವ ನೂತನ ವಿದ್ಯುತ್ ಟ್ರಾನ್ಸ್ಫಾರಂ ಹಾಗೂ ಪರಿಸರ ಸ್ವಚ್ಛತೆಗೆ ಬೇಕಾಗಿರುವ ಹಿಂಗು ಗುಂಡಿ ಮುಂತಾದ ಕೆಲಸ ಕಾರ್ಯಗಳಿಗೆ ಶಾಲಾ ಆಡಳಿತ ಸಮಿತಿಯು ಸಹಕರಿಸಿ ಶೀಘ್ರದಲ್ಲಿ ಕಟ್ಟಡ ಉದ್ಘಾಟನೆ ಮಾಡಲು ವ್ಯವಸ್ಥೆಗಳನ್ನು ಮಾಡಿ ಕೊಡುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ ವಿ ಲೀಲಾಧರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್, ಶಾಲಾ ಉಪ ಪ್ರಾಂಶುಪಾಲ ರಾದ ಪ್ರಕಾಶ್ ಮೂಡಿತ್ತಾಯ,ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ ಬಿ ಸುಧಾಕರ್ ರೈ, ಅಮೃತ ಮಹೋತ್ಸವ ಸಮಿತಿಯ ಜೊತೆ ಕೋಶಾಧಿಕಾರಿ ರಾಮಚಂದ್ರ ಪಲ್ಲತಡ್ಕ, ಕಾಲೇಜು ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಲಿಂಗಪ್ಪ ಗೌಡ ಮಾಸ್ಟರ್ ಕೇರ್ಪಳ, ಅಮೃತ ಮಹೋತ್ಸವ ಸಂಚಿಕೆಯ ಸಂಪಾದಕರು ಮತ್ತು ಶಾಲಾ ಎಸ್ ಡಿ ಎಂ ಸಿ ಶಿಕ್ಷಣ ತಜ್ಞರಾದ ಚಂದ್ರಶೇಖರ್ ಪೆರಾಲು,ಉಪಾಧ್ಯಕ್ಷರಾದ ಹಸೈನಾರ್ ಜಯನಗರ, ಸದಸ್ಯರಾದ ಶ್ರೀಮತಿ ವಿಶಾಲ ಸೀತಾರಾಮ ಅಜ್ಜಾವರ ಉಪಸ್ಥಿತರಿದ್ದರು.

ಕಟ್ಟಡ ವಿನ್ಯಾಸದ ಕುರಿತು ಕೆವಿಜಿ ಸಂಸ್ಥೆಯ ಆರ್ಕೆಟಿಕ್ ಇಂಜಿನಿಯರ್ ಸಾಯಿ ರಾಮ್ ಮತ್ತು ಇಂಜಿನಿಯರ್ ಭುವನೇಂದ್ರ ರವರು ನೂತನ ಕಟ್ಟಡದ ವಿನ್ಯಾಸದ ಕುರಿತು ಕಂಪ್ಯೂಟರ್ ಪರದೆಯ ಮೂಲಕ ಚಿತ್ರವನ್ನು ಪ್ರದರ್ಶಿಸಿ ಮಾಹಿತಿಯನ್ನು ನೀಡಿದರು.ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿ ಚಂದ್ರಶೇಖರ ಪೇರಾಲು ರವರು ವಂದಿಸಿದರು.