ಕೆ ವಿ ಜಿ ಕಾನೂನು ಮಹಾವಿದ್ಯಾಲಯ: ಯುವ ಸಂಸತ್ ಸ್ಪರ್ಧೆಯಲ್ಲಿ ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ಸುಳ್ಯ ತಾಲೂಕಿನ ನೆಹರು ಸ್ಮಾರಕ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ ೧೬ ರಂದು ನಡೆದ ತಾಲೂಕು ಮಟ್ಟದ ಯುವ ಸಂಸತ್?೨೦೨೬ ಸ್ಪರ್ಧೆಯಲ್ಲಿ ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದೊಂದಿಗೆ ನಡೆದ ಈ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿ ರಾಕೇಶ್ ನಾಯ್ಕ್ ಬಿ ಸಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.

ಕಾಲೇಜಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ೧೪ ವಿದ್ಯಾರ್ಥಿಗಳ ಪೈಕಿ ದ್ವಿತೀಯ ಎಲ್. ಎಲ್. ಬಿ ತರಗತಿಯ ರಾಕೇಶ್ ನಾಯ್ಕ್ ಬಿ ಸಿ, ಶಿವಗಣೇಶ್ ಬಿ ಜಿ, ರಂಜಿತ್ ಎಚ್ ಎಂ, ತೃತೀಯ ಎಲ್. ಎಲ್.ಬಿ ತರಗತಿಯ ಫರ್ಜಾನಾ ಬಿ, ಕೃಷ್ಣವೇಣಿ ಇ ವಿ ಹಾಗೂ ತೃತೀಯ ಬಿ.ಎ ಎಲ್. ಎಲ್. ಬಿ ತರಗತಿಯ ಪೂನಂ ಎಂ. ಎಂ ಸೇರಿದಂತೆ ಆರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಾಲೇಜಿನ ಅಣಕು ನ್ಯಾಯಾಲಯ ಮಾರ್ಗದರ್ಶಕಿ, ಉಪನ್ಯಾಸಕಿ ಶ್ರೀಮತಿ ಅರ್ಚನಾ ಆರ್ ರೈ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.