ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವಾಗಲೇ ಟರ್ಮ್ ಶೀಟ್ ಬದಲಾವಣೆ. ರಾಜ್ಯ ಸರಕಾರ ಜವಾಬ್ದಾರಿಯಲ್ಲ
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದಾಲಿ
ಹವಾಮಾನ ಆಧರಿತ ಬೆಳೆವಿಮೆಯಲ್ಲಿ ಕೇಂದ್ರ ಸರಕಾರಕ್ಕಿಂತ ರಾಜ್ಯ ಸರಕಾರದ ಹೆಚ್ಚು ಪ್ರೀಮಿಯಂ ಹಣ ನೀಡುತ್ತಿದೆ. ಕೇಂದ್ರ ಸರಕಾರ ಶೇ.10 ಪ್ರೀಮಿಯಂ ಪಾಲು ನೀಡಿದರೆ, ರಾಜ್ಯ ಸರಕಾರ ಶೇ.20 ಪಾಲು ನೀಡುತ್ತಿದೆ. ಆದರೆ ಬಿಜೆಪಿಯವರು ವಿಮಾ ಹಣ ಹೆಚ್ಚು ಬಂದಾಗ ಇದು ಕೇಂದ್ರ ಸರಕಾರದ ಯೋಜನೆ ಎಂದು ಬೊಂಬ್ಡಾ ಬಾರಿಸುತ್ತಾ
ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ಬಾರಿ ವಿಮೆ ಪರಿಹಾರ ಮೊತ್ತ ಕಡಿಮೆಯಾದಾಗ ರಾಜ್ಯ ಸರಕಾರವನ್ನು ದೂರುವ ಕೆಲಸ ಮಾಡುತ್ತಿದ್ದಾರೆ. ಅದು ಅವರ ರಾಜಕೀಯ ದೊಂಬರಾಟ” ಎಂದು ದ. ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಹೇಳಿದ್ದಾರೆ.















ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ” ಹವಾಮಾನ ಆಧರಿತ ಬೆಳೆ ವಿಮೆ ಯೋಜನೆ 2016-17 ರಿಂದ ಅನುಷ್ಠಾನಗೊಳಿಸಲಾಗಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಬೆಳೆ ವಿಮೆ ಕೊಡಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ ಹಿಂದೆ 100 ಘನ ಮೀಟರ್ ಗಿಂತ ಹೆಚ್ಚು ಮಳೆ ಬಂದರೆ ವಿಮಾ ಪರಿಹಾರ ನೀಡುವ ನಿಯಮವಿತ್ತು. ಅದರಂತೆ ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆಯ ರೈತರಿಗೆ ನಾಲ್ಕು ಪಟ್ಟು – ಎಂಟು ಪಟ್ಟು ಹೆಚ್ಚು ವಿಮಾ ಪರಿಹಾರ ಬರುತ್ತಿತ್ತು. ಆದರೆ ಇದರಿಂದ ವಿಮಾ ಕಂಪೆನಿಗೆ ನಷ್ಟ ಉಂಟಾದುದರಿಂದ ಮೂರು ವರ್ಷದ ಹಿಂದೆ ಯಾವ ವಿಮಾ ಕಂಪೆನಿಯೂ ವಿಮೆ ನೀಡುವ ಗುತ್ತಿಗೆ ಪಡೆಯಲು ಮುಂದೆ ಬರಲಿಲ್ಲ. ‘ ದ.ಕ. ಜಿಲ್ಲೆಯಲ್ಲಿ ಸರಾಸರಿ 225 ಘನ ಮೀಟರ್ ಮಳೆ ನಾಲ್ಕು ತಿಂಗಳಲ್ಲಿ ಬರುತ್ತಿದ್ದು, ಟರ್ಮ್ ಶೀಟ್ ಬದಲಾಯಿಸಿ 225 ಘನ ಮೀಟರ್ ಗಿಂತ ಹೆಚ್ಚು ಮಳೆ ಬಂದರೆ ಮಾತ್ರ ವಿಮಾ ಪರಿಹಾರ ಕೊಡಬೇಕೆಂಬ ನಿಯಮ ತಂದರೆ ಮಾತ್ರ ನಾವು ಬಿಡ್ ಹಾಕುತ್ತೇವೆ’ ಎಂದು ವಿಮಾ ಕಂಪೆನಿಗಳು ಹೇಳಿದ್ದರಿಂದ ಟರ್ಮ್ ಶೀಟ್ ಬದಲಾಯಿಸಲಾಗಿದೆ. ಈ ಬದಲಾವಣೆ ಮಾಡಿದ್ದು ಹಿಂದೆ ಬೊಮ್ಮಾಯಿ ಸರಕಾರ ಉಸ್ತುವಾರಿಯಲ್ಲಿರುವಾಗ.
ನಂತರ ಚುನಾವಣೆ ನಡೆದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಅದು ಜಾರಿಗೆ ಬಂದಿತು. ಟರ್ಮ್ ಶೀಟ್ ಬದಲಾಯಿಸಿದ್ದು ಕಾಂಗ್ರೆಸ್ ಅಂತ ಬಿ.ಜೆ.ಪಿ. ಪ್ರತಿಭಟನೆಯ ನಾಟಕ ಮಾಡತೊಡಗಿದೆ. ಹಾಗೆ ರಾಜಕೀಯ ಆರೋಪ ಮಾಡುವುದಿದ್ದರೆ, ಬಿ.ಜೆ.ಪಿ.ಸರಕಾರ ಮಾಡಿದ್ದು ಅಂತ ನಾವೂ ಹೇಳಬಹುದು. ಯಾಕೆಂದರೆ ಆಗ ಬಿ.ಜೆ.ಪಿ. ಸರಕಾರ ಆಡಳಿತದಲ್ಲಿತ್ತು. ಆದರೆ ನಾವು ಹಾಗೆ ಮಾಡಲು ಹೋಗುವುದಿಲ್ಲ. ಯಾಕೆಂದರೆ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಸಮಿತಿಯು ಈ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಟರ್ಮ್ ಶೀಟನ್ನು ನಿಯಮಾನುಸಾರ ತಯಾರಿಸಿ ರಾಜ್ಯ ಸರಕಾರದ ಸಮಿತಿಗೆ ಅನುಮೋದನೆಗೆ ಕಳುಹಿಸುತ್ತದೆ. ಅಧಿಕಾರಿಗಳೇ ಇದನ್ನು ಮಾಡುವಂತದ್ದು. ರಾಜ್ಯ ಸರ್ಕಾರಕ್ಕೂ ಅದಕ್ಕೂ ಸಂಬಂಧವಿಲ್ಲ. ನಾವು ಬಿ.ಜೆ.ಪಿ.ಯವರಂತೆ ಸುಳ್ಳು ಮಾಹಿತಿ ನೀಡಿ ರಾಜಕೀಯ ಮಾಡುವುದಿಲ್ಲ ” ಎಂದು ಮಹಮ್ಮದಾಲಿ ಹೇಳಿದರು.
” ಟರ್ಮ್ ಶೀಟ್ ಬದಲಾವಣೆಯಾಗದಿರುತ್ತಿದ್ದರೆ ವಿಮಾ ಕಂಪೆನಿಗಳು ವಿಮೆ ವಹಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಆಗ ನಮ್ಮ ರೈತರು ವಿಮಾ ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ದೇಶದ ಹಲವು ಬಿ.ಜೆ.ಪಿ. ರಾಜ್ಯಗಳು ಬೆಳೆವಿಮೆಯನ್ನು ಜಾರಿ ಮಾಡಿಯೇ ಇಲ್ಲ ” ಎಂದು ಸವರು ಹೇಳಿದರು.
” ಬಿ.ಜೆ.ಪಿ. ಆಡಳಿತದಲ್ಲಿರುವ ಸೊಸೈಟಿಗಳಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಕಿ ಬೆಳೆವಿಮೆಯ ಬ್ಯಾನರ್ ಮಾಡಿ ಕಟ್ಟಿದ್ದಾರೆ. ಆದರೆ ಕೇಂದ್ರಸರಕಾರ ಕೊಡುವುದಕ್ಕಿಂತ ಡಬ್ಬಲ್ ಪ್ರೀಮಿಯಂ ಹಣ ನೀಡುವ ರಾಜ್ಯ ಸರಕಾರದ ಮುಖ್ಯಮಂತ್ರಿಗಳ ಫೋಟೋ ಬ್ಯಾನರಲ್ಲಿ ಹಾಕುತ್ತಿಲ್ಲ. ನಾವು ಇದುವರೆಗೆ ಅದನ್ನು ಕೇಳಿರಲಿಲ್ಲ. ಇನ್ನು ಮುಂದೆ ಕೇಳುತ್ತೇವೆ” ಎಂದು ಮಹಮ್ಮದಾಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ , ಪ್ರಚಾರ ಸಮಿತಿ ಉಪಾಧ್ಯಕ್ಷ ಕರುಣಾಕರ ಅಡ್ಡಂಗಾಯ, ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.







