239 ತಾಲೂಕುಗಳಲ್ಲಿ ನಡೆಯಲಿರುವ ಕನ್ನಡ ಯಾತ್ರಗೆ ಅ 28 ರಂದು ಸುಳ್ಯ ತಾಲೂಕಿನಿಂದ ಆರಂಭ : ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ
ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಕರ್ನಾಟಕದಾದ್ಯಂತ ನಡೆಯಲಿರುವ ಕನ್ನಡ ಯಾತ್ರೆ ಅ. 28ರಂದು ಸುಳ್ಯ ತಾಲೂಕಿನಿಂದ ಆರಂಭವಾಗಲಿದ್ದು ರಾಜ್ಯದ 239 ತಾಲೂಕುಗಳಲ್ಲಿ ಈ ಯಾತ್ರೆ ನಡೆಯಲಿದೆ ಎಂದು ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಯವರು ಅ 26ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.














ಗಡಿನಾಡು ಕಾಸರಗೋಡಿನಲ್ಲಿ ಸತತ 42 ದಿನಗಳ ಕಾಲ ಕನ್ನಡ ಶಾಲಾ ಜಾಗೃತಿ ಮತ್ತು ಗಡಿನಾಡ ಕನ್ನಡಿಗರ ಹಕ್ಕುಗಳಿಗಾಗಿ ಅಭೂತಪೂರ್ವ ಚಳವಳಿ ನಡೆಸಿದ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಮಹತ್ವಾಕಾಂಕ್ಷೆಯ ‘ಕನ್ನಡ ಯಾತ್ರೆ’ ಈಗ ಕರ್ನಾಟಕಕ್ಕೆ ಪ್ರವೇಶಿಸಲು ಸಜ್ಜಾಗಿದೆ.
ಅಭಿಯಾನದ 43ನೇ ದಿನವಾದ ಬುಧವಾರ (28ನೇ ತಾರೀಕು) ಈ ಐತಿಹಾಸಿಕ ಯಾತ್ರೆಯು ಗಡಿ ದಾಟಿ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯದ 239 ತಾಲೂಕುಗಳ ಪೈಕಿ ಮೊದಲ ತಾಲೂಕಾಗಿ ಸುಳ್ಯ ತಾಲೂಕಿಗೆ ಪಾದಾರ್ಪಣೆ ಮಾಡಲಿದೆ.
ಕಾಸರಗೋಡಿನಾದ್ಯಂತ ನೂರಾರು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರ ಅಭಾವ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಗಡಿನಾಡಿನ ಕನ್ನಡ ರಕ್ಷಣೆಯ ಕುರಿತು ಜಾಗೃತಿ ಮೂಡಿಸಿದ್ದು ಈ ಯಾತ್ರೆಯು, ಈಗ ಕರ್ನಾಟಕದ ಗಡಿ ತಾಲೂಕಾದ ಸುಳ್ಯದ ಮೂಲಕ ರಾಜ್ಯವ್ಯಾಪಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿದೆ.
ಅಭಿಯಾನದ ಪ್ರಮುಖ ಬೇಡಿಕೆಗಳಾಗಿ
‘ಮುಚ್ಚುವ ಹಂತದಲ್ಲಿರುವ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು.
ಖಾಸಗಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿಷಯವನ್ನು ಕಡ್ಡಾಯಗೊಳಿಸುವುದು.
ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಆದ್ಯತೆ ಹಾಗೂ ಮೀಸಲಾತಿ ನೀಡುವುದು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಸಮಾನ ಶಿಕ್ಷಣವನ್ನು ಖಾತರಿಪಡಿಸುವುದು ಈ ಯಾತ್ರೆಯ ಗುರಿಯಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಭಿಯಾನದ ತಾಲೂಕು ಅಧ್ಯಕ್ಷ ಹಸೈನಾರ್ ಜಯನಗರ ರವರು ಮಾತನಾಡಿ ‘ ಕನ್ನಡ ಶಾಲೆ ಉಳಿಸಿ ಬೆಳೆಸಿ ಎಂಬ ಅಭಿಯಾನದಡಿಯಲ್ಲಿ ನಡೆಯಲಿರುವ ಈ ಯಾತ್ರೆಗೆ ಸುಳ್ಯದ ಸಮಿತಿ ವತಿಯಿಂದ ಭವ್ಯ ಸ್ವಾಗತವನ್ನು ಜಾಲ್ಸೂರಿನಿಂದ ಮಾಡಲಾಗುವುದು ಎಂದು ಹೇಳಿದರು. ಸುಳ್ಯ ತಾಲೂಕಿನಾದ್ಯಂತ ಒಂದು ವಾರಗಳ ಕಾಲ ಈ ಯಾತ್ರೆಯು ನಡೆಯಲಿದ್ದು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ಕೊಡುವ ಕೆಲಸ ಕಾರ್ಯಗಳು ನಡೆಯಲಿದೆ. ಮತ್ತು ತಾಲ್ಲೂಕಿನ ಸುಮಾರು 12 ಶಾಲೆಗಳಿಗೆ ಲೇಖನ ಬೋರ್ಡ್ ಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಭಿಯಾನದ ರಾಜ್ಯ ಸಮಿತಿಯ ಸಲಹೆಗಾರರು ಹಿರಿಯರಾದ ಪಿ ಬಿ ಸುಧಾಕರ್ ರೈ ರವರು ಮಾತನಾಡಿ ‘ಅಭಿಯಾನದ ವತಿಯಿಂದ ಈಗಾಗಲೇ ನಡೆಸಿರುವ ಕಾರ್ಯಕ್ರಮಗಳ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿ ಕನ್ನಡ ಶಾಲೆಗಳು ಉಳಿಯಲು ಮತ್ತು ಬೆಳೆಯಲು ಅಭಿಯಾನವು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ತಾಲೂಕು ಸಮಿತಿಯ ಉಪಾಧ್ಯಕ್ಷರುಗಳಾದ ರಂಜಿತ್ ಪೂಜಾರಿ,ಶಂಕರ್ ಪೆರಾಜೆ, ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ ಉಪಸ್ಥಿತರಿದ್ದರು.







