ರಂಗಮಯೂರಿಯ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

0

ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ ವತಿಯಿಂದ ವಾರ್ಷಿಕ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ‌ ಮೇ.15 ರಂದು ನಡೆಯಿತು.

ಕಳೆದ ಐದು ವರ್ಷದಿಂದ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಎಲ್ಲಾ ಕಲಾ ಪ್ರಕಾರಗಳಲ್ಲೂ ಭಾಗವಹಿಸಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಕೂಡ ಗೆದ್ದು, ಸಂಸ್ಥೆಗೆ ಕೀರ್ತಿಯನ್ನು ತಂದಿರುವ ವಿದ್ಯಾರ್ಥಿಗಳು ವಾರ್ಷಿಕ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುನ್ನತ್ತ ಅಂಕ ಗಳಿಸಿರುವುದರ ಜೊತೆಗೆ ಎಲ್ಲಾ ಪ್ರಕಾರದ ಪಠ್ಯೇತರ ಚಟುವಟಿಕೆಗಳಲ್ಲಿತಮ್ಮದೇ ಅದ ಛಾಪು ಮೂಡಿಸಿರುವುದು ಹೆಮ್ಮೆಯ ವಿಷಯ. ಎಳವೆಯಲ್ಲಿಯೇ ಕಲಾ ಜಗತ್ತಿಗೆ ಕಾಲಿರಿಸಿದ ವಿದ್ಯಾರ್ಥಿಗಳು , ಹಲವಾರು ಕಲಾ ಪ್ರಕಾರಗಳನ್ನು ಕಲಿತು ಅವಕಾಶಗಳನ್ನು ಬಳಸಿಕೊಂಡು ಕಲಾವಿದರಾಗಿ ಒಂದಿಷ್ಟು ವೇದಿಕೆಗಳಲ್ಲಿ ಗುರುತಿಸಿಕೊಂಡವರು. ಇದರ ಜೊತೆಗೆ ಕಲಿಕೆಯಲ್ಲೂ ಸಮಾನ ಆಸಕ್ತಿಯನ್ನು ತೋರಿಸಿ ಕಲಿತ ಶಾಲೆಗೆ, ಪೋಷಕರಿಗೆ, ಗುರುಗಳ ಮೆಚ್ಚುಗೆಗೆ ಪಾತ್ರರಾದ ಸಾಧಕ ವಿದ್ಯಾರ್ಥಿಗಳಿಗೆ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪಿಯುಸಿಯಲ್ಲಿ ವಿದ್ಯಾರ್ಥಿನಿಯರಾದ ಸಂಜನಾ ಬದಿಕಾನ (85%), ಅನುಶ್ರೀ ಕೇಕಡ್ಕ (83%) ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಸನಿಹಾ ಶೆಟ್ಟಿ (99%) , ವೈಷ್ಣವಿ ಶೆಟ್ಟಿ (96%) , ಪೃಥ್ವಿ ರೈ ಮೇನಾಲ (96%)
ತನಿಶ್ ಅಡ್ತಲೆ (86%ICSE) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಸಂಸ್ಥೆಗೆ, ಗುರುಗಳಿಗೆ ಹಾಗೂ ಪೋಷಕರಿಗೆ ಹೆಗ್ಗಳಿಕೆಯನ್ನು ತಂದಿರುವುದು ಸಂತಸದ ವಿಚಾರ.
ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಕೆ.ವಿ.ಜಿ. ತಾಂತ್ರಿಕ ಶಿಕ್ಷಣದ ಉಪಾನ್ಯಾಸಕ ಹಾಗು ರಂಗ ಮಯೂರಿಯ ಪೋಷಕರಾದ ಭವಾನಿ ಶಂಕರ್ ಅಡ್ತಲೆ ಮಾತನಾಡುತ್ತಾ “ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬೆಳೆಸುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಸಿ, ಶೈಕ್ಷಣಿಕವಾಗಿ,ಬೌದ್ದಿಕವಾಗಿ ಬೆಳೆಸಿ ಓದಿನಲ್ಲಿ ಉತ್ತಮ ಅಂಕ ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಉದಾಹರಣೆ” ಎಂದರು.

ಕಾರ್ಯಕ್ರಮದಲ್ಲಿ ರಂಗಮಯೂರಿ ಕಲಾಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲ್, ರಂಗಮಯೂರಿಯ ಆಡಳಿತ ವರ್ಗ,ಪೋಷಕ ಸಮಿತಿ ಸದಸ್ಯರು, ಪೋಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.