ಎನ್ನೆಂಸಿ ನೇಚರ್ ಕ್ಲಬ್ ನಿಂದ ನಾರ್ಕೋಡು ಶಾಲೆಯಲ್ಲಿ ಹಸಿರು ಉಸಿರು ಸಸ್ಯೋದ್ಯಾನ ನಿರ್ಮಾಣ

0

ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಆಲೆಟ್ಟಿ, ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯ, ಹಿರಿಯ ವಿದ್ಯಾರ್ಥಿ ಸಂಘ ಆಲೆಟ್ಟಿ ಶಾಲೆ, ವಿಕ್ರಮ ಯುವಕ ಮಂಡಲ ಬಾರ್ಪಣೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ (ನಾರ್ಕೊಡು)ಯಲ್ಲಿ ಹಸಿರು ಉಸಿರು ಸಸ್ಯೋದ್ಯಾನ ನಿರ್ಮಾಣ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಜೂನ್ 07 ರಂದು ಹಮ್ಮಿಕೊಳ್ಳಲಾಯಿತು.

ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಗೌರವ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಈ ರಮೇಶ್ ಮಾತನಾಡಿ ‘ಸುಳ್ಯ ಪರಿಸರದ ಹಸಿರು ಸಮೃದ್ದತೆ ಬಯಲು ಸೀಮೆ ಪ್ರದೇಶಕ್ಕಿಂತ ಹೆಚ್ಚು. ಇಲ್ಲಿನ ಪ್ರಕೃತಿ ಸಂರಕ್ಷಣೆ ಮಾಡುವಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಅಗತ್ಯ ಮತ್ತು ಶಾಲಾ ಆವರಣದಲ್ಲಿ ಗಿಡ ನೆಟ್ಟು ಇಲ್ಲಿನ ಮಕ್ಕಳಲ್ಲಿ ಸಸ್ಯ ಸಂರಕ್ಷಿಸುವ ಹೊಣೆ ನೀಡುವ ಕಾರ್ಯಕ್ರಮ, ಆಯೋಜಕರ ಪ್ರಯತ್ನ ಶ್ಲಾಘನೀಯ’ ಎಂದರು.


ಈ ಸಂದರ್ಭದಲ್ಲಿ ಕೃಷಿ ಸಾಧನೆಗಾಗಿ ಸ್ವತಃ ಉಳುಮೆ ಮೂಲಕ ಭತ್ತದ ಕೃಷಿ ಉಳಿಸಿಕೊಂಡಿರುವ ಶಿವರಾಮ ಗೌಡ ಕಲ್ಲೆಂಬಿ, ಪ್ರಸಿದ್ದ ನಾಟಿ ವೈದ್ಯ ರಾದ ಲೋಲಜಾಕ್ಷ ಭೂತಕಲ್ಲು ಮತ್ತು ಕುಮಾರಿ ಕಲ್ಲೆಂಬಿ ಇವರನ್ನು ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಆಲೆಟ್ಟಿ ಗ್ರಾಮ ಪಂಚಾಯತ್ ನ ಸದಸ್ಯ ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿ ಚಂದ್ರಕಾಂತ ನಾರ್ಕೋಡು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತ ಇಂದು ಗಿಡ ಮರಗಳ ರಕ್ಷಣೆಯ ಅನಿವಾರ್ಯತೆ ಬಗ್ಗೆ ವಿವರಿಸಿ, ಸನ್ಮಾನ ಸ್ವೀಕರಿಸಿದ ಹಿರಿಯರ ಸಾಧನೆಗಳ ಪರಿಚಯ ಮಾಡಿದರು.


ವೇದಿಕೆಯಲ್ಲಿ ಗೌರವ ಗಣ್ಯರಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಚಂದ್ರ ಗೌಡ, ಅತಿಥಿಗಳಾದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ ಎಂ, ಸುಳ್ಯ ಕ್ಷೇತ್ರ ಶಿಕ್ಷಣ ಸಂಯೋಜಕಿ ಸಂದ್ಯಾಕುಮಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮ ಡಿ ಉಪಸ್ಥಿತರಿದ್ದರು. ಭಾಗವಹಿಸಿದ ಗಣ್ಯರಿಗೆ ಮತ್ತು ಮಕ್ಕಳಿಗೆ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನೇಚರ್ ಕ್ಲಬ್ ಸದಸ್ಯರಾದ ಚಂಪಾ ಮತ್ತು ಅರ್ಚನಾ ಪರಿಸರ ಗೀತೆಯೊಂದಿಗೆ ಪ್ರಕೃತಿ ಮಾತೆಯನ್ನು ಪ್ರಾರ್ಥಿಸಿ, ನೇಚರ್ ಕ್ಲಬ್ ಕಾರ್ಯದರ್ಶಿ ಶ್ರೇಯಾ ಕೆ ವಂದಿಸಿದರು. ಸುಪ್ರೀತಾ ಟಿ ಕೆ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಅಕ್ಷತಾ, ಕೃತಿಕಾ, ಅಜಿತ್ ಕುಮಾರ್ ಮತ್ತು ಲ್ಯಾಬ್ ಸಹಾಯಕಿ ಭವ್ಯ ಹಾಗೂ ಆಲೆಟ್ಟಿ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು. ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಮತ್ತು ಬಳಗದವರು ಕಳೆ ಕತ್ತರಿಸುವ ಯಂತ್ರವನ್ನು ಒದಗಿಸಿ ಶಾಲಾ ಆವರಣದ ಸ್ವಚ್ಚತೆಗೆ ತೊಡಗಿಸಿಕೊಂಡರು.


ಕಾಲೇಜಿನ ನೇಚರ್ ಕ್ಲಬ್ ಸದಸ್ಯರು ಶಾಲಾ ಆವರಣದಲ್ಲಿ ಸುಮಾರು 45 ವಿವಿಧ ಜಾತಿಯ ಹಣ್ಣಿನ, ಗಿಡಗಳನ್ನು ನೆಟ್ಟು ತಾತ್ಕಾಲಿಕ ಬೇಲಿಯ ವ್ಯವಸ್ಥೆ ಮಾಡಿ ಕೊನೆಯ ಅವಲೋಕನ ಅವಧಿಯ ನಂತರ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಪೋಷಿಸುವ ಜವಾಬ್ದಾರಿ ವಹಿಸಲಾಯಿತು.