ನನ್ನನ್ನು ಅಮಾನತು ಅಥವಾ ಉಚ್ಛಾಟನೆ ಮಾಡುವ ಯೋಗ್ಯತೆ ಇವರಿಗಿದೆಯೇ ? : ಮಹೇಶ್ ಕರಿಕ್ಕಳ ಪ್ರಶ್ನೆ

0

ತಾಕತ್ತಿದ್ದರೆ ನಿಂತಿಕಲ್ ಸಮಾವೇಶದಲ್ಲಿ ಭಾಗವಹಿಸಿದ ಜನರನ್ನು ಉಚ್ಛಾಟನೆ ಮಾಡಲಿ

ನಾನು ಯಾವುದೇ ರೀತಿಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದವನಲ್ಲ. ಆದರೂ ನನ್ನನ್ನು ಪಕ್ಷದಿಂದ ಅಮಾನತು ಅಥವಾ ಉಚ್ಛಾಟನೆ ಮಾಡಿದ್ದಾರಾದರೆ ಅಂತಹ ಯೋಗ್ಯತೆ ಅವರಿಗಿದೆಯೇ ಎಂದು ನಾನು ಕೇಳಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಕಲ್ಮಡ್ಕ ಗ್ರಾ.ಪಂ.ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಪ್ರತಿಕ್ರಿಯೆ ನೀಡಿದ್ದಾರೆ.


ಇಡೀ ತಾಲೂಕಲ್ಲಿ ಇಡೀ ತಾಲೂಕಲ್ಲಿ ಒಂಬತ್ತಕ್ಕೆ ಒಂಬತ್ತು ಕಾಂಗ್ರೆಸ್ ಸದಸ್ಯರಿರುವ ಪಂಚಾಯತ್ ನಮ್ಮ ಕಲ್ಮಡ್ಕ ಪಂಚಾಯತ್ ಮಾತ್ರ. ಈ ಕೆಲವು ಲೀಡರ್ ಗಳಿಗೆ ಅವರ ಊರಲ್ಲಿ, ಅವರ ಬೂತಲ್ಲಿ ಕಾಂಗ್ರೆಸ್ ಗೆ ಲೀಡ್ ತರಿಸಲು ಆಗಿಲ್ಲ. ಇಂತವರು ನಮ್ಮನ್ನು ಅಮಾನತು ಮಾಡುವುದು ಎಂತದು ? ನಾನು ನೈಜ ಕಾಂಗ್ರೆಸ್ಸಿಗ. ನನ್ನನ್ನು ಉಚ್ಛಾಟಿಸಿದರೆ ನಾಳೆಯಿಂದ ಪಂಬೆತ್ತಾಡಿ ಗ್ರಾಮದಲ್ಲಿ ಕಾಂಗ್ರೆಸ್ ಇರುವುದಿಲ್ಲ. ಅದನ್ನು ನಾಯಕರು ನೆನಪಲ್ಲಿ ಇಟ್ಟುಕೊಳ್ಳಲಿ. ಇವರಿಗೆ ಧಮ್ಮು ತಾಕತ್ತು ಇದ್ದರೆ ಮೊನ್ನೆ ನಿಂತಿಕಲ್ ನಲ್ಲಿ ನಂದಕುಮಾರ್ ಪರ ಒಂದು ಸಾವಿರ ಜನ ಸೇರಿದ್ರಲ್ಲ..ಅವರನ್ನು ಉಚ್ಛಾಟನೆ ಮಾಡಲಿ ಎಂದು ಮಹೇಶ್ ಹೇಳಿದ್ದಾರೆ.


ಕೃಷ್ಣಪ್ಪರು ಕಾಂಗ್ರೆಸ್ಸನ್ನು ಲಗಾಡಿ ತೆಗೆಯಲಿಕ್ಕೇ ಬಂದಂತಾಗಿದೆ. ಬ್ಲಾಕ್ ಅಧ್ಯಕ್ಷರು ವ್ಯಕ್ತಿಯಾಗಿ ಭಾರಿ ಒಳ್ಳೆಯವರು. ಆದರೆ ಬ್ಲಾಕ್ ಅಧ್ಯಕ್ಷರಾಗಿ ವಿಫಲರಾದವರು. ಅವರನ್ನು ಬದಲಾಯಿಸಬೇಕು. ಬ್ಲಾಕ್ ಉಪಾಧ್ಯಕ್ಷನಾಗಿದ್ದು, ನಾನು ಕೋರ್ ಕಮಿಟಿ ಸದಸ್ಯನಾಗಿದ್ದು, ಎನ್.ಎಸ್.ಯು.ಐ. ಯಿಂದಲೇ ಕಾಂಗ್ರೆಸ್ ನಲ್ಲಿ ಬೆಳೆದು ಬಂದವನು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡದೆಯೇ ನನ್ನನ್ನು ಅಮಾನತು ಮಾಡುತ್ತಾರೆಂದರೆ ಏನು ಹೇಳಬೇಕು ?” ಎಂದು ಮಹೇಶ್ ಕರಿಕ್ಕಳ ಪ್ರತಿಕ್ರಿಯಿಸಿದ್ದಾರೆ.