ಸೋಣಂಗೇರಿಯ ಸರ್ಕಲ್ ನಿರ್ಮಾಣದ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಎಸ್.ಅಂಗಾರ ಭೇಟಿ, ಕಾಮಗಾರಿ ವೀಕ್ಷಣೆ

0

ಪೈಚಾರಿನಿಂದ ಬೆಳ್ಳಾರೆಗೆ ಸಂಪರ್ಕಿಸುವ ಮುಖ್ಯ ರಸ್ತೆ ಸೋಣಂಗೇರಿಯಲ್ಲಿ ವಿಸ್ತಾರವಾದ ಸರ್ಕಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಾಜಿ ಸಚಿವ ಎಸ್. ಅಂಗಾರರು ಇಂದು ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಸಚಿವ ಎಸ್. ಅಂಗಾರರು ಸುಳ್ಯ, ಬೆಳ್ಳಾರೆ, ಗುತ್ತಿಗಾರು ಸುಬ್ರಹ್ಮಣ್ಯ, ಜಾಲ್ಸೂರು, ರಸ್ತೆಗಳಿಗೆ ಪ್ರಮುಖ ಜಂಕ್ಷನ್ ಆಗಿ ಸೋಣಂಗೇರಿ ಜಂಕ್ಷನ್ ಇದ್ದು ಇದೀಗ ಇಲ್ಲಿ ವೃತ್ತ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಪ್ರದೇಶ ಅತ್ಯಾಕರ್ಷಕವಾಗಿ ರೂಪುಗೊಳ್ಳಲಿದೆ. ವೃತ್ತದ ಸುತ್ತಲೂ ಡಿವೈಡರ್ ನಿರ್ಮಾಣವಾಗಲಿದ್ದು ಭವಿಷ್ಯದ ದೃಷ್ಟಿಯಿಂದ ಈ ರಸ್ತೆಯ ಅಗಲೀಕರಣ ಕಾಮಗಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಸುಳ್ಯ ನಗರ ಪಂಚಾಯತ್ ಪುರಸಭೆಯಾಗಿ ಮಾರ್ಪಾಡಾಗಲಿದ್ದು ಜಾಲ್ಸೂರು ಮತ್ತು ಸೋಣಂಗೇರಿ ಭಾಗದ ಕೆಲವು ಭಾಗಗಳು ಅದರಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಗಳಿದೆ. ಈ ದೃಷ್ಟಿಯಿಂದ ಈ ಭಾಗದಲ್ಲಿ ವೃತ್ತ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು. ಇದರೊಂದಿಗೆ ಜಾಲ್ಸೂರು, ಸುಬ್ರಹ್ಮಣ್ಯ, ಬೆಂಗಳೂರು ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ಹೇಳಿದರು.

ಪೈಚಾರ್-ಸೋಣಂಗೇರಿ-ಬೆಳ್ಳಾರೆ ರಸ್ತೆ ೪ ಕೋಟಿ ರೂ ವೆಚ್ಚದಲ್ಲಿ ೧.೫ ಕಿ.ಮಿ.ರಸ್ತೆ ಅಗಲೀಕರಣಗೊಂಡು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಆಗಿದೆ. ಪೈಚಾರ್‌ನಿಂದ ಸೋಣಂಗೇರಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ತನಕ ರಸ್ತೆ ಅಭಿವೃದ್ಧಿ ಅಗಿದೆ. ಜಾಲ್ಸೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಸೋಣಂಗೇರಿ ಭಾಗದ ೩ ಕಿ.ಮಿ.ರಸ್ತೆ ದ್ವಿಪಥವಾಗಿ ೫ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಆಗಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿ ಮಾಡಲಾಗಿದ್ದು ೫೦-೫೪ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಂಡಿದೆ. ಡಾಮರೀಕರಣ ಪೂರ್ಣಗೊಂಡಿದೆ. ವೃತ್ತ, ಡಿವೈಡರ್, ರಸ್ತೆ ಸುರಕ್ಷತಾ ಸಿಗ್ನಲ್‌ಗಳ ಕೆಲಸ ಮತ್ತಿತರ ಕಾಮಗಾರಿಗಳು ಬಾಕಿ ಇದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ್ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ನ.ಪಂ.ಸದಸ್ಯ ಸುಧಾಕರ, ಜಾಲ್ಸೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಶಿಕಲಾ ನಾಯಕ್, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಮುರಳಿ ಭೀಮಾಜಿಗೋಡ್ಲು, ಚಂದ್ರಶೇಖರ ನೆಡಿಲ್ ಮತ್ತಿತರರು ಉಪಸ್ಥಿತರಿದ್ದರು.