ಐವರ್ನಾಡು, ಸುಳ್ಯ, ಸುಬ್ರಹ್ಮಣ್ಯ ಭಾಗದ ರಬ್ಬರ್ ಮೂರ್ತೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಧದೇವಿಯವರಿಗೆ ದಕ್ಷಿಣ ಕನ್ನಡ ರಬ್ಬರ್ ಇಂಡಸ್ಟ್ರಿ & ಎಂಪ್ಲಾಯಿಸ್ ಯೂನಿಯನ್ ನಿಂದ ಮನವಿ ನೀಡಲಾಗಿದೆ.
ಕಾರ್ಮಿಕರ ವಸತಿ ಗೃಹಗಳಿಗೆ ಸುಣ್ಣ ಬಣ್ಣ ಹಚ್ಚಿಸ ಬಾಬ್ತು ವೇತನ ಪಾವತಿ, ಮರಗಳಿಗೆ ಮಳೆ ಕವಚ ಅಳವಡಿಸಿದ ವೇತನ ಪಾವತಿ, ಕಾರ್ಮಿಕ ಹದಗೆಟ್ಟಿರುವ ಮನೆಗಳ ದುರಸ್ತಿ, ಕಳೆದ 15 ವರ್ಷಗಳಿಂದ ಹಂಗಾಮಿ ನೆಲೆಯಲ್ಲಿ ಮೂರ್ತೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸುವುದು, ಕಳೆದ ವರ್ಷದ ದೀಪಾವಳಿ ಲಯ ಉಳಿಕೆ ಬೋನಸ್ 11.67% ನ್ನು ಪಾವತಿಸುವುದು, ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಬೋನಸ್ 20% ನೀಡಿಕೆ, ರೆಪ್ಕೋಬ್ಯಾಂಕಿನಿಂದ ಕಾರ್ಮಿಕರಿಗೆ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡುವಿಕೆ ಮತ್ತು ಉದ್ಯಾನವನ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಔಷಧಗಳು ಕಾರ್ಮಿಕರಿಗೆ ದೊರಕಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯನ್ನು ಸ್ವೀಕರಿಸಿದ ರಾಧಾ ದೇವಿಯವರು ಕಾರ್ಮಿಕರ ಕಷ್ಟ ಏನೆಂಬುದರ ಅರಿವು ನನಗಿದೆ. ನಿಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ತಿಳಿಸಿರುವುದಾಗಿ ಸಂಘಟನೆಯ ಪದಾಧಿಕಾರಿಗಳು ಸುದ್ದಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ರಬ್ಬರ್ ಇಂಡಸ್ಟ್ & ಎಂಪ್ಲಾಯಿಸ್ ಯೂನಿಯನ್‌ನ ಅಧ್ಯಕ್ಷ ಸೆಲ್ವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ ರಾಮಸ್ವಾಮಿ ಸರ್ಖಾಸ್ತು, ಉಪಾಧ್ಯಕ್ಷೆ ಶ್ರೀಮತಿ ಕೃಷ್ಣವೇಣಿ ಕುಕ್ಕಂದೂರು, ಪದಾಧಿಕಾರಿಗಳಾದ ದಯಾನಂದ್ ಮೇದಿನಡ್ಕ, ಕೃಷ್ಣಕುಮಾರ್ ದರ್ಖಾಸ್ತು, ತ್ಯಾಗರಾಜ್ ದರ್ಖಾಸ್ತು ಸೇರಿದಂತೆ ಇತರ ಪದಾಧಿಕಾರಿಗಳು, ಕಾರ್ಮಿಕರು ಮನವಿ ನೀಡುವಲ್ಲಿ ಉಪಸ್ಥಿತರಿದ್ದರು. ಮೂರು ಡಿವಿಷನ್ ಗಳ ವಿಭಾಗೀಯ ವ್ಯವಸ್ಥಾಪಕ ಹರ್ಷವರ್ಧನ್ ಈ ಸಂದರ್ಭದಲ್ಲಿ ರಾಧಾದೇವಿಯವರ ಜೊತೆಗಿದ್ದರು.