ನಗರದ ಕಸ ಕಲ್ಚೆರ್ಪೆಯಲ್ಲಿ ಡಂಪಿಂಗ್

0

ಸ್ಥಳೀಯರ ಆಕ್ರೋಶ : ಪ್ರತಿಭಟನೆಗೆ ನಿರ್ಧಾರ

ಸುಳ್ಯ ನಗರದ ಕಸ ಇದೀಗ ಮತ್ತೆ ಕಲ್ಚೆರ್ಪೆಯಲ್ಲಿ ಡಂಪಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಆಕ್ರೋಶ ಗೊಂಡಿದ್ದು ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯ ನಗರದ ಕಸವನ್ನು‌ ಹಲವು ವರ್ಷಗಳಿಂದ ಕಲ್ಚರ್ಪೆಯಲ್ಲಿ ತಂದು ಹಾಕಲಾಗುತಿತ್ತು. ಬಳಿಕ ಅಲ್ಲಿ ಜಾಗವಿಲ್ಲದೆ ನಗರ ಪಂಚಾಯತ್ ಆವರಣವನ್ನೇ‌ ಡಂಪಿಂಗ್ ಏರಿಯವನ್ನಾಗಿ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಬಳಿಕ ನಗರ ಪಂಚಾಯತ್ ಇತ್ತೀಚೆಗೆ ಕಸವನ್ನು ಸಾಗಾಟ ಮಾಡಿ ನಗರ ಪಂಚಾಯತ್ ಆವರಣ ಸ್ವಚ್ಚ ಮಾಡಿದೆ.

ಅಲ್ಲದೆ ನಗರದ ಕಸವನ್ನು ಕಲ್ಚೆರ್ಪೆಯಲ್ಲಿ ಅಳವಡಿಸಲಾಗಿರುವ ಬರ್ನಿಂಗ್ ಮೆಷಿನ್ ಮೂಲಕ ಬರ್ನ್ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರಿಂದಾಗಿ ಕಸದ ಸಮಸ್ಯೆ ಒಂದಷ್ಟು ಕಡಿಮೆಯಾಗಿ ಕಲ್ಚೆರ್ಪೆಯ ಜನರು ಕೂಡಾ ನಿಟ್ಟುಸಿರು ಬಿಡುವಂತಾಗಿತ್ತು.

ಆದರೆ ಕಳೆದ ಕೆಲ‌ ದಿನಗಳಿಂದ ಕಲ್ಚೆರ್ಪೆಯಲ್ಲಿ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ಯಾವತ್ತೂ ಈ ರೀತಿ ಇಲ್ಲದ ಸೊಳ್ಳೆಗಳು ಕೆಲ ದಿನಗಳಿಂದ ವ್ಯಾಪಕವಾಗಿದ್ದುದನ್ನು ಕಂಡು ಪರಿಸರದ ಜನರು ಚಿಂತೆಗೊಳಗಾದಾಗ ಕಲ್ಚೆರ್ಪೆಯಲ್ಲಿ ಫಾರೆಸ್ಟ್ ಜಾಗದ ಒಳಗೆ ಕಸದ ರಾಶಿ ಪತ್ತೆಯಾಯಿತು. ಇದೀಗ ಆ ಕಸದ ರಾಶಿ ಹೆಚ್ಚುತ್ತಿದೆ. ಈ ಬಗ್ಗೆ ಸ್ಥಳೀಯರು ನಗರ ಪಂಚಾಯತ್ ಎದುರು ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

“ಕಲ್ಚೆರ್ಪೆಯಲ್ಲಿ ‌ಕಸ ಹಾಕುವುದಿಲ್ಲ ಎಂದು ನ.ಪಂ. ನವರು ಹೇಳಿದ್ದರು. ಇದೀಗ ಮತ್ತೆ ಇಲ್ಲಿ ಕಸ ಡಂಪಿಂಗ್ ಮಾಡುತ್ತಿದ್ದು ಇದರಿಂದ ಸಮಸ್ಯೆ ಎದುರಾಗಿದೆ.‌ಇದನ್ನು ತೆರವು ಮಾಡಬೇಕು ಮತ್ತು ಕಸ ಹಾಕುವುದನ್ನು ಇಂದಿನಿಂದಲೇ ನಿಲ್ಲಿಸಬೇಕು ಇಲ್ಲವಾದಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯ ನಿವಾಸಿ ಅಶೋಕ್ ಪೀಚೆ ಸುದ್ದಿಗೆ ತಿಳಿಸಿದ್ದಾರೆ.

ಇಲ್ಲಿ ಕಸ ಹಾಕುವುದಿಲ್ಲ‌ ಎಂದು ಹೇಳಿದ್ದಾರೆ.‌ ಈಗ ಮತ್ತೆ ಹಾಕುತ್ತಿದ್ದಾರೆ. ಸೊಳ್ಳೆ ಕಾಟ ವಿಪರಿತವಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಇಲ್ಲಿ ಬಂದು ನಿಂತು ನೋಡಲಿ ಆಗ ಅವರಿಗೆ ಸಮಸ್ಯೆ ನಿಜಾರ್ಥ ಅರ್ಥವಾಗುತ್ತದೆ. ಆದಷ್ಟು ಬೇಗ ಇಲ್ಲಿಯ ಕಸ ವಿಲೇ ಮಾಡಬೇಕು ಹಾಗೂ ಮತ್ತೆ ಇಲ್ಲಿಗೆ ತಂದು ಹಾಕದಂತೆ ಆಗಬೇಕು ಎಂದು ಸ್ಥಳೀಯರಾದ ಬಾಲಚಂದ್ರ ‌ಕಲ್ಪೆರ್ಪೆ ತಿಳಿಸಿದ್ದಾರೆ.