ದುಡಿಮೆಗೆ ಗುರಿಯಿರಲಿ, ದುಡಿಯುವುದರಲ್ಲಿ ನಿಯಮವಿರಲಿ : ಡಾ. ಉಜ್ವಲ್ ಯು.ಜೆ.
ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್‍ಸ್ ಡೇ ಕಾರ್ಯಕ್ರಮವು ಕೆ.ವಿ.ಜಿ.ಸಿ.ಇ. ಸಂಸ್ಥೆಯ ಸಭಾಂಗಣದಲ್ಲಿ ಸೆ. ೧೫ ರಂದು ನಡೆಯಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪ್ರೊ. ಶ್ರೀಕಾಂತ್ ಕೆ., ಪ್ರಾಂಶುಪಾಲರು, ಕೆ.ವಿ.ಜಿ. ಐ.ಟಿ.ಐ. ಭಾಗಮಂಡಲ, ಕೊಡಗು ಇವರು ಮಾತನಾಡಿ ಈ ದಿನ ನಮಗೆ ವಿಶೇಷ ದಿನ. ಇಂದು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಇಂಜಿನಿಯರ್‍ಸ್ ಡೇ ಎಂದು ಆಚರಿಸಲಾಗುತ್ತದೆ. ಅವರನ್ನು ಇಂದಿಗೂ ಸ್ಮರಿಸಿಕೊಳ್ಳಲು ಕಾರಣ ಅವರು ಮಾಡಿದ ಕೆಲಸಗಳು. ಜಲಾಶಯ ನಿರ್ಮಾಣ, ತೂಗು ಸೇತುವೆ ನಿರ್ಮಾಣದಿಂದ ಹಿಡಿದು ಸಮಾಜಕ್ಕೆ ನೆರವಾಗುವಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ ಹಾಗೆ ಯುವ ಜನಾಂಗ ಸರ್.ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿ ಉತ್ತಮ ರೀತಿಯಲ್ಲಿ ಸಮಾಜದ ಏಳೀಗೆಯಲ್ಲಿ ಉತ್ತಮ ಪಾತ್ರ ವಹಿಸಬೇಕು ಎಂದು ನುಡಿದು ನೆರೆದಿದ್ದ ಎಲ್ಲರಿಗೂ ಇಂಜಿನಿಯರ್‍ಸ್ ಡೇ ಶುಭಾಶಯವನ್ನು ಕೋರಿದರು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಸರ್.ಎಂ. ವಿಶ್ವೇಶ್ವರಯ್ಯನವರು ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಗೆ ಮುಖ್ಯಸ್ಥರಾಗಿದ್ದರು.
೧೯೩೪ರಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲೂ ಅವರ ಪಾತ್ರವಿತ್ತು. ಅವರ ಸಾರ್ವಜನಿಕ ಸೇವೆಯನ್ನು ನೋಡಿ Knight Commander of the British Indian Empire ಎಂಬ ಬಿರುದನ್ನು ನೀಡಲಾಯಿತು. ೧೯೫೫ರಲ್ಲಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ ಪಾತ್ರರಾದರು. ಪದವಿ ಪ್ರಜಾಸೇವೆಗೆ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ ಹಾಗೂ ವಿದ್ಯಾರ್ಥಿಗಳು ಪ್ರತಿಕ್ಷಣವೂ ಮೌಲ್ಯಯುತವಾಗಿ ಶ್ರಮಿಸಿದರೆ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಸರ್.ಎಂ.ವಿ.ಯವರ ಧ್ಯೇಯವಾಕ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ನೆರೆದಿದ್ದ ಪ್ರತೀ ವಿದ್ಯಾರ್ಥಿಯನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ಮಾತನಾಡಿ ಎಲ್ಲರಿಗೂ ಇಂಜಿನಿಯರ್‍ಸ್‌ಡೇಯ ಶುಭಾಶಯಗಳನ್ನು ತಿಳಿಸುತ್ತಾ ಸರ್. ಎಂ. ವಿಶ್ವೇಶ್ವರಯ್ಯರವರಂತೆ ಪ್ರತಿಯೊಬ್ಬರು ಉತ್ತಮ ಇಂಜಿನಿಯರುಗಳಾಗಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಹಕಾರಿಯಾಗುವಂತೆ ಬದುಕಿ ಸಮಾಜದ ಒಳಿತಿಗೆ ಪಾತ್ರರಾಗಿ ಎಂದು ನುಡಿದರು. ಇದೇ ಕಾರ್ಯಕ್ರಮದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇಂಜಿನಿಯರ್‍ಸ್ ಡೇ ಪ್ರಯುಕ್ತ ಪ್ರೊ. ಶ್ರೀಕಾಂತ್ ಕೆ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಪ್ರೊ. ಲೋಕೇಶ್ ಪಿ.ಸಿ ಧನ್ಯವಾದ ಸಮರ್ಪಿಸಿದರು. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಅನನ್ಯ ಹೆಬ್ಬಾರ್ ಪ್ರಾರ್ಥಿಸಿ, ಎನ್.ಎಸ್.ಎಸ್. ಘಟಕಾಧಿಕಾರಿಗಳಾದ ಡಾ. ಪ್ರಜ್ಞ ಎಂ.ಆರ್ ಮತ್ತು ವಿದ್ಯಾರ್ಥಿನಿ ಸಪ್ತಮಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಇದೇ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಎಲ್ಲಾ ವಿಭಾಗಳ ಮುಖ್ಯಸ್ಥರು ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂಧಿಗಳು ಭಾಗವಹಿಸಿದ್ದರು.