ಕಾಂಗ್ರೆಸ್ ಸರ್ಕಾರವು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಕಾರ್ಮಿಕರಿಗೆ ಸಿಗುವಂತಹ ಸವಲತ್ತುಗಳನ್ನು ಕಡಿತಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇದನ್ನು ಭಾರತೀಯ ಮಜ್ದೂರು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಇಂದು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಭಾರತೀಯ ಮಜ್ದೂರು ಸಂಘ ಸುಳ್ಯದ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಕಾರ್ಮಿಕರಿಗೆ ಅನ್ಯಾಯ ಎಸಗುವ ಸಕಲ ಯೋಜನೆಯು ಕಾಂಗ್ರೆಸ್ ಸರ್ಕಾರದಿಂದ ಸಿದ್ಧವಾಗಿದೆ. ಬಡ ಕಾರ್ಮಿಕರ ಸೌಲಭ್ಯಗಳನ್ನು ಕಸಿದುಕೊಳ್ಳುವ ಮೂಲಕ ದಬ್ಬಾಳಿಕೆಯ ರಾಜಕೀಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಈ ರೀತಿಯಾಗಿ ಕಾರ್ಮಿಕರ ಮೇಲೆ ಅನ್ಯಾಯವನ್ನು ಮಾಡಲು ನಾವು ಬಿಡುವುದಿಲ್ಲ. ಕಾರ್ಮಿಕರು ಸರ್ಕಾರದಿಂದ ಭಿಕ್ಷೆಯನ್ನು ಬೇಡುತ್ತಿಲ್ಲ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದಿಂದ ಹಿಡಿದು ಕಾರ್ಮಿಕರ ರಕ್ಷಣೆಗೆ ಇರುವ ಎಲ್ಲಾ ಸೌಲಭ್ಯಗಳನ್ನು ಕಡಿತಗೊಳಿಸಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸ್ತುತ ಸುಳ್ಯದಲ್ಲಿ ಓರ್ವ ಕಾರ್ಮಿಕ ಮುಖಂಡ ಕಾರ್ಮಿಕರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಾರ್ಮಿಕರಲ್ಲದವರಿಗೆ ನಕಲಿ ನೋಂದಾವಣಿ ಪತ್ರವನ್ನು ಮಾಡುವ ಮೂಲಕ ಚಂದ ವಸೂಲಿ ಮಾಡುವ ಮೂಲಕ ಕಾರ್ಮಿಕರನ್ನು ಲೂಟಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಮುಂದೆ ಈ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ಭಾರತೀಯ ಮಜ್ದೂರ್ ಸಂಘ ಬಿಡುವುದಿಲ್ಲ ಎಂದು ಹೇಳಿದರು.
ಬಿ ಎಂ ಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರದ ಈ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಸಿಗುವ ಹಕ್ಕುಗಳನ್ನು ಯಾವುದೇ ರೀತಿಯಲ್ಲಿ ಮೊಟಕುಗೊಳಿಸಲು ನಾವು ಬಿಡುವುದಿಲ್ಲ ಎಂದು ಹೇಳಿದರು. ನಾವೆಲ್ಲರೂ ಒಗ್ಗಟ್ಟಾಗಿದ್ದು ಇನ್ನು ಮುಂದೆ ನಿಮ್ಮ ಯಾವುದೇ ರೀತಿಯ ಆಟ ಇಲ್ಲಿ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತು ಈ ಬಗ್ಗೆ ಸೂಕ್ತ ನ್ಯಾಯವನ್ನು ಕಾರ್ಮಿಕರಿಗೆ ಕೊಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನ್ಯಾಯವಾದಿ ಭಾಸ್ಕರ್ ರಾವ್ ಮಾತನಾಡಿ ಕಾರ್ಮಿಕರ ಹಣವನ್ನು ಮಂಡಳಿಯು ದುರುಪಯೋಗಪಡಿಸುತ್ತಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಕಾರ್ಮಿಕರ ಮನವಿಗಳಿಗೆ ಸ್ಪಂದಿಸದೆ ಇದ್ದಾಗ ಕಾರ್ಮಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ತಾಲೂಕು ಸಮಿತಿಯ ಗೌರವಾಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ರಾಜಕೀಯವನ್ನು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮಾಡಬೇಕೆ ವಿನಹ ಚುನಾವಣೆಯ ಬಳಿಕ ಅಧಿಕಾರಕ್ಕೆ ಬಂದ ಮೇಲೆ ಕೆಳಮಟ್ಟದ ರಾಜಕೀಯವನ್ನು ಮಾಡಿ ಕಾರ್ಮಿಕರಿಗೆ ಸಂಕಟ ತರುವುದು ಸರಿಯಲ್ಲ ಎಂದು ಹೇಳಿದರು. ನಾವು ಕೂಡ ಕಾರ್ಮಿಕರಾಗಿ ದುಡಿದವರು. ಆದ್ದರಿಂದ ಕಾರ್ಮಿಕರ ನೋವು ಮತ್ತು ಅವರ ಅವಶ್ಯಕತೆ ಏನಿರುತ್ತದೆ ಎಂಬುವುದು ನಮಗೆ ಸರಿಯಾಗಿ ತಿಳಿದಿದೆ. ಆದ್ದರಿಂದ ಸರ್ಕಾರದ ಈ ಧೋರಣೆಯನ್ನು ಯಾವುದೇ ರೀತಿಯಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ಸಂಘಟನಾ ಮುಖಂಡರುಗಳಾದ ಅಶೋಕ ಅಡ್ಕಾರ್, ದಾಮೋದರ ಮಂಚಿ, ಸೇರಿದಂತೆ ೫೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.