ರಾತ್ರಿಯೇ ಪೊಲೀಸ್ ನಾಯಿ ಆಗಮನ
ಸುಳ್ಯ ನಗರದ ಜಟ್ಟಿಪಳ್ಳ ಬೋರುಗುಡ್ಡೆ ನಿವಾಸಿ ಮೋಹನದಾಸ ಮುದ್ಯ ರವರ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಸುಮಾರು 20 ಲಕ್ಷ ರೂ ಮೌಲ್ಯದ 350 ಗ್ರಾಂ ಚಿನ್ನಾಭರಣ ಕಳವು ನಡೆಸಿದ್ದಾರೆಂದು ತನಿಖೆಯ ವೇಳೆ ಗೊತ್ತಾಗಿದೆ.
ಮೋಹನದಾಸ್ ಮುದ್ಯ ದಂಪತಿ ಚೆನ್ನೈ ಗೆ ಹೋಗಿ ಅಲ್ಲಿಂದ ಹಿಂತಿರುಗಿ ಹಾಸನದಲ್ಲಿದ್ದ ಮಗಳ ಮನೆಯಲ್ಲಿದ್ದ ವೇಳೆ ಸುಳ್ಯದ ಅವರ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಬಟ್ಟೆಗಳನ್ನು ಚೆಲ್ಲಪಿಲ್ಲಿಗೊಳಿಸಿ ಅದರ ಎಡೆಯಲ್ಲಿದ್ದ ಚಿನ್ನಾಭರಣದ ಕಟ್ಟನ್ನು ಕದ್ದೊಯ್ದಿದ್ದರು. ನಿನ್ನೆ ಸಂಜೆ ಅವರ ಮನೆಯ ಮಹಡಿಯಲ್ಲಿ ಬಾಡಿಗೆಗಿದ್ದ ವ್ಯಕ್ತಿಗೆ ಮನೆಯ ಬಾಗಿಲು ಒಡೆದಿರುವ ವಿಷಯ ಗಮನಕ್ಕೆ ಬಂದು ಪೊಲೀಸ್ ಕಂಪ್ಲೇಟ್ ಆಗಿತ್ತು. ರಾತ್ರಿ ಮಂಗಳೂರಿನಿಂದ ಬೆರಳಚ್ಚು ತಜ್ಞರು ಮತ್ತು ಪೊಲೀಸ್ ಶ್ವಾನದಳವು ಬಂದು ತಪಾಸಣೆ ನಡೆಸಲಾಗಿತ್ತು.
ಹಾಸನದಲ್ಲಿದ್ದ ಮೋಹನ್‌ದಾಸ್ ಮುದ್ಯ ದಂಪತಿ ವಿಷಯ ತಿಳಿದು ಮಧ್ಯರಾತ್ರಿ ಸುಳ್ಯಕ್ಕೆ ಮರಳಿದರು. ತಪಾಸಣೆ ನಡೆಸಿದ ವೇಳೆ ಉಂಗುರ, ಸರ, ನೆಕ್ಲೇಸ್ ಸಹಿತ ಸುಮಾರು 350 ಗ್ರಾಂ. ನಷ್ಟು ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಅದಕ್ಕೆ ರೂ.20 ಲಕ್ಷ ಮೌಲ್ಯ ಆಗುತ್ತದೆಂದು ಅಂದಾಜಿಸಲಾಗಿದೆ.
ಪೊಲೀಸರು ತನಿಖೆ ಮುಂದುವರೆಸಿದ್ದಾರೆ.