ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 23 ಮತ್ತು 24ರಂದು ಬಾಳಿಲ ವಿದ್ಯಾಬೋಧಿನೀ ಹಿ. ಪ್ರಾ. ಶಾಲಾ ವಠಾರದಲ್ಲಿ ಜರಗಿತು.
ಅ. 23 ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಆಗಮನ, ಗಣಪತಿ ಹವನ, ಶಾರದಾದೇವಿಯ ಪ್ರತಿಷ್ಠೆ, ಆಭರಣಧಾರಣೆ, ಶಾರದಾದೇವಿಗೆ ಮೂಗುತಿ ಸಮರ್ಪಣೆ ನಡೆಯಿತು ಬಳಿಕ ಸಮಿತಿಯ ಅಧ್ಯಕ್ಷ ಶೇಷಪ್ಪ ಪರವರವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀಮತಿ ನಾಗರತ್ನ ಆರ್.ಭಟ್ ಕುಂಭ ಫಾರ್ಮ್ಸ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಸದಸ್ಯ ರಮೇಶ್ ರೈ ಅಗಲ್ಪಾಡಿ, ಕಳಂಜ ಬಾಳಿಲ ಪ್ರಾ.ಕೃಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಿತಿಯ ಗೌರವಾಧ್ಯಕ್ಷರಾಗಿದ್ದ ರಾಮಚಂದ್ರ ಭಟ್ ಬಾಳಿಲರವರ ಪತ್ನಿ ಶ್ರೀಮತಿ ನಾಗರತ್ನರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಮಹಿಳಾ ಸಮಿತಿಯ ಸದಸ್ಯೆ ಶ್ರೀಮತಿ ಯಶೋಧ ಪೊಸೋಡು ಪ್ರಾರ್ಥಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಕಮಲಾ ಸ್ವಾಗತಿಸಿ, ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ ವಂದಿಸಿದರು. ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀಮತಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬಾಬು ಅಜಿಲ ಬಾಳಿಲ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಅ. 22ರಂದು 30 ಗಜಗಳ 7 ಜನರ ಅಂಡರ್ ಆರ್ಮ್ ಕ್ರಿಕೆಟ್ ಮತ್ತು ಮುಕ್ತ ಕಬಡ್ಡಿ ಪಂದ್ಯಾಟ ಮತ್ತು 45 ಕೆ.ಜಿ ವಿಭಾಗದ ಕಿರಿಯರ ಕಬಡ್ಡಿ ಪಂದ್ಯಾಟ, ಪುರುಷರಿಗೆ, ಮಹಿಳೆಯರಿಗೆ ಹಗ್ಗ ಜಗ್ಗಾಟ ಅಂಗನವಾಡಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಅಪರಾಹ್ನ ಸಾರ್ವಜನಿಕ ಮಹಿಳೆಯರಿಗೆ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸೇವಾ ಗೌರವ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು. ಬಳಿಕ ದೇವದಾಸ್ ಕಾಫಿಕಾಡ್ ರವರ ಚಾ ಪರ್ಕ ಕಲಾವಿದರಿಂದ ಪುದರ್ ದೀತಾಂಡ್ ತುಳು ನಾಟಕ ನಡೆಯಿತು.
ಅ. 24ರಂದು ಬೆಳಿಗ್ಗೆ ಗೀತಜ್ಞಾನ ಯಜ್ಞ ಘಟಕ ಬಾಳಿಲ ಇವರಿಂದ ಶ್ರೀಮದ್ ಭಗವದ್ಗೀತೆ ಪಾರಾಯಣ, ತಾಳನಿನಾದಂ ಭಜನಾ ತಂಡ ಪಡ್ಪಿನಂಗಡಿಯವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು.ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಶಿಕ್ಷಕ ಶ್ರೀನಿವಾಸ ರೈ ಎನ್.ಜಿ.ಯವರಿಗೆ ರಾಮಚಂದ್ರ ಕೆದಿಲ ಸ್ಮರಣಾರ್ಥ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಶಿಕ್ಷಕ ಉದಯಕುಮಾರ್ ರೈ ಮತ್ತು ಸುಳ್ಯ ತಾಲೂಕು ಜರ್ನಲಿಸ್ಟ್ ಯೂನಿಯನ್ ನ ಅಧ್ಯಕ್ಷ, ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಡಿ.ವೈ.ಎಸ್.ಪಿ ಯಾಗಿರುವ ಜಗನ್ನಾಥ ರೈ ಬಜನಿ ಮತ್ತು ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಟಿ. ವಿಶ್ವನಾಥ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ ಶೇಷಪ್ಪ ಪರವ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕಮಲ, ಸಮಿತಿಯ ಗೌರವ ಸಲಹೆಗಾರರಾದ ಎ.ಕೆ. ನಾಯ್ಕ್ ಚೊಕ್ಕಾಡಿ, ಅಶೋಕ್ ಶೆಟ್ಟಿ ಅರ್ಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಸಮಿತಿಯ ಕಾರ್ಯಾಧ್ಯಕ್ಷ ಎ.ಎಂ. ಸುಧಾಕರ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜೇಶ್ ಸುವರ್ಣ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ರಾಜೇಶ್ ಗೌಡ ಎ, ರಾಮ್ ಪ್ರಸಾದ್ ಕಾಂಚೋಡು ಮತ್ತು ಲೋಕೇಶ್ ಬೆಳ್ಳಿಗೆ ಸನ್ಮಾನಿತರಿಗೆ ಶುಭಾಸಂಶನೆ ನುಡಿದರು. ಬಾಲಕೃಷ್ಣ ಮರೆಂಗಾಲ ವಂದಿಸಿದರು.
ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಬಳಿಕ ಚೆಂಡೆ ವಾದನ, ಚಿಲಿಪಿಲಿ ಗೊಂಬೆ ಬಳಗ, ಡಿ.ಎಸ್. ಬ್ಯಾಂಡ್ ಬಂಟ್ವಾಳ ತಂಡ ಮತ್ತು ಕುಣಿತ ಭಜನೆ ಸೇರಿದಂತೆ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆದು ಬೊಮ್ಮಣಮಜಲು ಹೊಳೆಯಲ್ಲಿ ಜಲಸ್ಥಂಭನ ನಡೆಯುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.