ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ ಕಾರ್ಯಕ್ರಮ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ನೆನಪಿನೊಂದಿಗೆ ಉಪನ್ಯಾಸ, ಸನ್ಮಾನ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ-2023 ಹಾಗೂ ಜ್ಞಾನಪೀಠ ಪ್ರಶಸ್ತಿ ಪ್ರರಸ್ಕೃತ ಸಾಹಿತಿಗಳ ನೆನಪು ಕಾರ್ಯಕ್ರಮ ನವೆಂಬರ್ 1ರಿಂದ ನವೆಂಬರ್ 7ರ ವರೆಗೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಸಾಹಿತ್ಯ ಸಂಭ್ರಮ 2023ರ ಉದ್ಘಾಟನೆ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ. ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮ ನ.1ರಂದು ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಅಜ್ಜಾವರ ಸರಕಾರಿ ಪ್ರೌಢಶಾಲೆ, ಚೈತ್ರ ಯುವತಿ ಮಂಡಲ ಮತ್ತು ಪ್ರತಾಪ ಯುವಕ ಮಂಡಲದ ಆಶ್ರಯದಲ್ಲಿ ನಡೆಯಲಿದೆ. ವಿಶೇಷವಾಗಿ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ನೂರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ.
ನ.2 ರಂದು ಏಕ್ಯೂಎಸಿ ಕನ್ನಡ ವಿಭಾಗ, ಕನ್ನಡ ಸಂಘ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ ಇವರ ನೆನಪು ಕಾರ್ಯಕ್ರಮ ಹಾಗೂ ಗೀತ ಸಾಹಿತ್ಯ ವೈವಿಧ್ಯ ಕಾರ್ಯಕ್ರಮ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಅಪರಾಹ್ನ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಇವರ ನೆನಪು, ಗೀತ ಸಾಹಿತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ನ.3 ರಂದು ರೋಟರಿ ಪ್ರೌಢಶಾಲೆ ಮಿತ್ತಡ್ಕ ಹಾಗೂ ರೋಟರಿ ಕ್ಲಬ್ ಸುಳ್ಯ ಇವರ ಸಹಕಾರದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ ಶಿವರಾಮ ಕಾರಂತರ ನೆನಪು ಕಾರ್ಯಕ್ರಮ ನಡೆಯಲಿದೆ.ನ. 4ರಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿ( ಪ್ರೌಢಶಾಲೆ)ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನೆನಪು ಮತ್ತು ಭಾವ ಗಾನ ಕಾರ್ಯಕ್ರಮ ನಡೆಯಲಿದೆ.ನ. 5ರಂದು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇವರ ಸಹಕಾರದೊಂದಿಗೆ ತಾಲೂಕು ಮಟ್ಟದ ಕವಿಗೋಷ್ಠಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್ ನೆನಪು ಕಾರ್ಯಕ್ರಮ ಸುಳ್ಯದ ಕನ್ನಡ ಭವನದಲ್ಲಿ ನಡೆಯಲಿದೆ. ನ. 6ರಂದು ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದೊಂದಿಗೆ ಕನ್ನಡದ ಕಿರಣ -ಕುತ್ಯಾಳ ಕಾರ್ಯಕ್ರಮ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ನೆನಪು ಕಾರ್ಯಕ್ರಮ ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಲಿದೆ.
ನ. 7ರಂದು ಸಾಹಿತ್ಯ ಸಂಭ್ರಮ ಸಮಾರೋಪ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಬದುಕು ಬರಹ ಅವಲೋಕನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಟ್ಟಿಪಳ್ಳದ ದಯಾನಂದ ಆಳ್ವರ ಮನೆಯಲ್ಲಿ ನಡೆಯಲಿದೆ. ಕಸಾಪ ಅಧ್ಯಕ್ಷ ಚಂದ್ರಶೇಖರ ಪ್ರೇರಾಲು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ ಡಾ.ನರೇಂದ್ರ ರೈ ದೇರ್ಲ ಸಮಾರೋಪ ಭಾಷಣ ಮಾಡಲಿದ್ದಾರೆ .ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಬದುಕು ಬರಹ ಕುರಿತು ಉಪನ್ಯಾಸಕ ಸಂಜೀವ ಕುದ್ಪಾಜೆ ಮಾತನಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ನಿತಿನ್ ಪ್ರಭು, ಪಿ.ಬಿ.ಸುಧಾಕರ್ ರೈ ಕೋಡ್ಲ ಗಣಪತಿ ಭಟ್, ಜಯರಾಮ ಬೊಳಿಯಮಜಲು ಇವರಿಗೆ ಸನ್ಮಾನ ನಡೆಯಲಿದೆ. ಗಾಯಕ ಕೆ ಆರ್ ಗೋಪಾಲಕೃಷ್ಣರವರು ಕನ್ನಡ ಭಾವಗಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ಕೆ., ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಕೇಶವ ಸಿ.ಎ.,ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ ಲತಾಶ್ರೀ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು