ನಾಯಿಕಿತ್ತಳೆ ಕಸಿ ಗಿಡಗಳ ಲೋಕಾರ್ಪಣೆ

0


ಅಡಿಕೆಯನ್ನು ನಂಬಿ ಕೂರಬೇಡಿ ಇತರ ಬೆಳೆಗಳತ್ತಲೂ ನೋಡಿ : ಶ್ರೀಪಡ್ರೆ

ನಾಡ ಮಾವು, ನಾಡ ಹಲಸು ಮತ್ತು ಇತರ ಸ್ಥಳೀಯ ಕೃಷಿ ತಳಿಗಳ ಸಂರಕ್ಷಣೆಗೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತಿರುವ ನಾಡ ಮಾವು ಮತ್ತು ಹಲಸು ಸಂರಕ್ಷಣಾ ಬಳಗ ಸುಳ್ಯ ಇದರ ವತಿಯಿಂದ ಹಳ್ಳಿಗಳಲ್ಲಿ ಹಿಂದೆ ಸಾಕಷ್ಟು ಇದ್ದು ಈಗ ಅಳಿವಿನಂಚಿಗೆ ಬಂದಿರುವ ನಾಯಿ ಕಿತ್ತಳೆ ತಳಿಯನ್ನು ಉಳಿಸುವುದಕ್ಕಾಗಿ ನಾಯಿ ಕಿತ್ತಳೆ ಕಸಿ ಗಿಡಗಳ ಲೋಕಾರ್ಪಣಾ ಸಮಾರಂಭ ಡಿ.೩ರಂದು ಸುಳ್ಯ ಎ.ಪಿ.ಎಂ.ಸಿ. ಸಭಾಂ ಗಣದಲ್ಲಿ ನಡೆಯಿತು.


ನಾಯಿ ಕಿತ್ತಳೆ ಕಸಿಗಿಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅಡಿಕೆ ಪತ್ರಿಕೆ ಸಂಪಾದಕ ಹಾಗೂ ಕೃಷಿ ತಜ್ಞ ಶ್ರೀಪಡ್ರೆಯವರು `ಲೋಕಲ್ ತಳಿಗಳಲ್ಲಿ ರೋಗಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಔಷಧೀಯ ಗುಣ ಹೆಚ್ಚು ಇದೆ. ಅವುಗಳನ್ನು ವಾಣಿಜ್ಯ ರೂಪದಲ್ಲಿ ಬಳಕೆ ಮಾಡಿ ಮೌಲ್ಯವರ್ಧನೆಗೈದರೆ ಆದಾಯ ಮೂಲವಾಗುತ್ತದೆ. ನಾಯಿ ಕಿತ್ತಳೆ ಹಣ್ಣು ಕೂಡ ಅದ್ಭುತ ರುಚಿಯ ಜ್ಯೂಸ್ ತಯಾರಿಸಬಲ್ಲ ಹಣ್ಣು. ಇಂತಹ ಕಾಡುಹಣ್ಣುಗಳನ್ನು ಉಳಿಸಿ ಬೆಳೆಸಿದರೆ ಅಳಿದು ಹೋಗಿರುವ ಹಾಗೂ ಅಳಿವಿನಂಚಿನಲ್ಲಿರುವ ನೂರಾರು ಪ್ರಭೇದಗಳು ಜನರಿಗೆ ಮತ್ತೆ ಲಭ್ಯವಾಗುತ್ತದೆ'' ಎಂದರು.

ಅಡಿಕೆಗೆ ಭವಿಷ್ಯ ಇಳಿಮುಖವಾ ಗುತ್ತಿದೆ. ಇನ್ನು ಅದು ಎಷ್ಟು ವರ್ಷ ಹೀಗೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಕರು ಇತರ ಬೆಳೆಗಳು ಮತ್ತು ತಳಿಗಳತ್ತಲೂ ಗಮನಹರಿಸಬೇಕು'' ಎಂದರು. ಕಾರ್ಯಕ್ರಮವನ್ನು ವಿಜಯನಗರ ಹೊಸಪೇಟೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಂ.ರಮೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಸಿ ತಜ್ಞ ಕುಂಞಿಹಿತ್ಲು ಶ್ಯಾಮ ಭಟ್ ಗುತ್ತಿಗಾರು ಸಭಾಧ್ಯಕ್ಷತೆ ವಹಿಸಿದ್ದರು. ನಾಮಾಮಿ ಪ್ರಯತ್ನದಿಂದ ಈಗ ನೂರಾರು ಮಂದಿ ಕಸಿಕಟ್ಟುವುದನ್ನು ಕಲಿತಿದ್ದಾರೆ. ಪ್ರತೀ ಮನೆಯ ಮಕ್ಕಳೂ ಕಸಿ ಕಟ್ಟುವುದನ್ನು ಕಲಿತರೆ ಕೃಷಿಯಲ್ಲಿ ಕ್ರಾಂತಿ ಆಗುತ್ತದೆ. ಸುದ್ದಿಯವರು ಶಾಲೆಗಳಲ್ಲಿ ಕಸಿಕಟ್ಟುವ ತರಬೇತಿ ನೀಡುವ ಕಾರ್ಯಕ್ರಮ ಏರ್ಪಡಿಸುವುದಿದ್ದರೆ ನಾವು ಭಾಗಿಯಾಗುತ್ತೇವೆ” ಎಂದು ಶ್ಯಾಮ ಭಟ್ ಹೇಳಿದರು.
ನಾಯಿ ಕಿತ್ತಳೆ ಹಣ್ಣಿನ ಮರ ಇರುವ ಮಡಪ್ಪಾಡಿಯ ಅಜಯ್ ವಾಲ್ತಾಜೆ ದಂಪತಿ, ಜಯರಾಮ ಹಾಡಿಕಲ್ಲು ದಂಪತಿ, ದುಗಲಡ್ಕದ ರವಿಕೇಶವ್‌ರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.


ಕುಂಬ್ಳೆಯ ಶ್ಯಾಮರಾಜ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಾಮಾಮಿ ಬಳಗದ ಜಯರಾಮ ಮುಂಡೋಳಿಮೂಲೆ ಸ್ವಾಗತಿಸಿ, ಕೆ.ಪಿ. ಜಗದೀಶ್ ವಂದಿಸಿದರು. ಶ್ರೀಮತಿ ಮಧುರ ಜಗದೀಶ್ ಹಾಗೂ ಶ್ರೀಮತಿ ಮೋಹಿನಿ ವಿಶ್ವನಾಥ್ ಕಾರ್ಯಕ್ರಮ ನಿರೂ ಪಿಸಿದರು. ಶ್ರೀಶಕುಮಾರ್, ಜಗದೀಶ್ ಮೊದಲಾದವರು ಸಹಕರಿಸಿದರು.