ಮುಕ್ಕೂರು : ಹಳೆ ವಿದ್ಯಾರ್ಥಿಗಳಿಗೆ, ಊರವರಿಗೆ ಕ್ರೀಡಾಕೂಟ

0

ಅಕ್ಷರ ದೇಗುಲದ ಬಗ್ಗೆ ಅಕ್ಕರೆ ಇರಲಿ : ಮೋಹನ ಬೈಪಡಿತ್ತಾಯ

ಅಕ್ಷರ ದೇಗುಲವಾಗಿರುವ ಶಾಲೆಯ ಬಗ್ಗೆ ಊರಿನ ಪ್ರತಿಯೋರ್ವರು ಪ್ರೀತಿ, ಅಭಿಮಾನ ಹೊಂದಿದಾಗ ಶಾಲೆಯು ಬೆಳಗುತ್ತದೆ, ಊರು ಪ್ರಗತಿ ಕಾಣುತ್ತದೆ ಎಂದು ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಹೇಳಿದರು.

ಡಿ.22 ರಂದು ನಡೆಯಲಿರುವ ಮುಕ್ಕೂರು ಸ.ಉ.ಪ್ರಾ.ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಡಿ.3 ರಂದು ನಡೆದ ಹಳೆ ವಿದ್ಯಾರ್ಥಿಗಳಿಗೆ, ಊರವರರಿಗೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಶಕಗಳ ಹಿಂದೆ ಊರಿನಲ್ಲಿ‌ ನಡೆಯುವ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ಜನರಲ್ಲಿ ಇತ್ತು. ಈಗ ಕಾಲ ಬದಲಾಗಿದೆ. ಹೊಸ ಹೊಸ ಆಧುನಿಕ ತಂತ್ರಜ್ಞಾನಗಳಿಗೆ ಮಾರು ಹೋಗಿ ಇಂತಹ ಆಸಕ್ತಿಗಳನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು ಎಂದರು.

ನಾಯಕತ್ವ ಅಂದರೆ ತಾನು ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವುದು ಅನ್ನುವುದು ಅಲ್ಲ. ನಾಯಕನಾಗಿ ಇತರರಿಗೆ ಅವಕಾಶ ಕಲ್ಪಿಸಿ ಅವರನ್ನು ಮೊದಲ ಸಾಲಿನಲ್ಲಿ ತಂದು ನಿಲ್ಲಿಸುವವನೇ ನಿಜವಾದ ನಾಯಕ ಎಂದ ಅವರು ಡಿ.22 ರಂದು ನಡೆಯುವ ಶಾಲಾ ವಾರ್ಷಿಕೋತ್ಸವ ಅಭೂತಪೂರ್ವ ಯಶಸ್ಸು ಕಾಣಲಿ ಎಂದರು.

ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ, ಮುಕ್ಕೂರು ಶಾಲೆ ಶತಮಾನದ ಹೊಸ್ತಿನಲ್ಲಿದೆ. ಮೊಳಹಳ್ಳಿ ಶಿವರಾಯರಂತಹ ಹಿರಿಯರ ಯೋಚನೆಯ ಫಲವಾಗಿ ನಮ್ಮೂರಿನಲ್ಲಿ ಶಾಲೆ ಸ್ಥಾಪನೆಯಾಗಿದೆ. ಅನೇಕ ಹಿರಿಯರ ಪರಿಶ್ರಮದ ಫಲವಾಗಿ ಈ ಹಂತಕ್ಕೆ ತಲುಪಿದೆ. ಹದಿನೈದು ವರ್ಷದ ಬಳಿಕ ಇಲ್ಲಿ ವಾರ್ಷಿಕೋತ್ಸವದ ಸಂಭ್ರಮ ಮನೆ ಮಾಡಿದೆ. ಇಂತಹ ಕಾರ್ಯಕ್ರಮಗಳಲ್ಲಿ ನಾವು ಪೂರ್ಣ ಸಹಕಾರ ನೀಡುವ ಮೂಲಕ ನಾವೆಲ್ಲರ ಸಂಭ್ರಮದಲ್ಲಿ ಸಹಭಾಗಿಗಳಾಗೋಣ ಎಂದರು.

ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಜಾತಿ, ಧರ್ಮ, ಪಕ್ಷ ಬಿಟ್ಟು ಶಾಲೆಯ ಏಳಿಗಾಗಿ ಯೋಚಿಸಿದರೆ ಆಗ ಅದರಿಂದ ಸಕಾರಾತ್ಮಕ ಫಲಿತಾಂಶ ದೊರೆಯಲು ಸಾಧ್ಯವಿದೆ. ಶಾಲಾ ವಾರ್ಷಿಕೋತ್ಸವ ಅಂದರೆ ಅದು ಊರಿನ ಜಾತ್ರೆ. ಇದರಲ್ಲಿ ಪಾಲ್ಗೊಳ್ಳುವುದೇ ಒಂದು ಪುಣ್ಯದ ಕಾರ್ಯ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಮುಕ್ಕೂರು ಸ.ಉ.ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ನಿತಿನ್ ಕಾನಾವು, ಮುಕ್ಕೂರು-ಪೆರುವಾಜೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್ ನಾಯ್ಕ ಕುಂಡಡ್ಕ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷೆ ಸುನೀತಾ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ, ಮುಕ್ಕೂರು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸೌಮ್ಯ ಬರಮೇಲು ಮೊದಲಾದವರು ಉಪಸ್ಥಿತರಿದ್ದರು.

ಮುಕ್ಕೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಕ್ಕೂರು ಸ.ಉ.ಪ್ರಾ.ಶಾಲಾ ಪ್ರಭಾರ ಮುಖ್ಯಗುರು ಅರವಿಂದ ಕಜೆ ಸ್ವಾಗತಿಸಿ, ಶಿಕ್ಷಕಿ ಲಲಿತಾ ಕುಮಾರಿ ಮನವಳಿಕೆ ವಂದಿಸಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಶಾಲಾ ಹಿತಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು ಉಪಸ್ಥಿತರಿದ್ದರು.

ಆಮಂತ್ರಣ ಪತ್ರಿಕೆ ಬಿಡುಗಡೆ
ಇದೇ ಸಂದರ್ಭದಲ್ಲಿ ಡಿ.22 ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಬಹುಮಾನ ವಿತರಣೆ
ಸಂಜೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಸ.ಉ.ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಉದ್ಯಮಿ ಅಬ್ದುಲ್ ಶಮೀರ್ ಕುಂಡಡ್ಕ, ಅಂಚೆ ಪಾಲಕಿ ದೀಕ್ಷಾ ನೀರ್ಕಜೆ, ಪ್ರಬಾರ ಮುಖ್ಯಗುರು ಅರವಿಂದ ಕಜೆ ಉಪಸ್ಥಿತರಿದ್ದರು. ಶಾಲಾ ಗೌರವ ಶಿಕ್ಷಕಿ ವಿದ್ಯಾ, ಅತಿಥಿ ಶಿಕ್ಷಕಿ ಸರಿತಾ, ಅಂಗನವಾಡಿ ಶಿಕ್ಷಕಿ ರೂಪ ವಿಜೇತರ ಪಟ್ಟಿ ವಾಚಿಸಿದರು. ಎಣ್ಮೂರು ಸರಕಾರಿ ಪ್ರೌಢಶಾಲಾ ಮುಖ್ಯಗುರು ಲಿಂಗಪ್ಪ ಬೆಳ್ಳಾರೆ ತೀರ್ಪುಗಾರರಾಗಿ ಸಹಕರಿಸಿದರು. ವಿವಿಧ ವಿಭಾಗದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್, ವಾಲಿಬಾಲ್, ಲಕ್ಕಿಗೇಮ್ ಸ್ಪರ್ಧೆ ನಡೆಯಿತು.