ನ್ಯಾಯಕ್ಕಾಗಿ ಹೋರಾಟ ಮಾಡುವ ವಕೀಲರ ಮೇಲೆ ಪೊಲೀಸರ ದೌರ್ಜನ್ಯ ಸಹಿಸಲು ಅಸಾಧ್ಯ : ನಾರಾಯಣ ಕೆ.
ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಮ್ ಎಂಬುವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ದೌರ್ಜನ್ಯ ವಸಗಿರುವುದು ಖಂಡನೀಯ. ನ್ಯಾಯಕ್ಕಾಗಿ ಹೋರಾಟ ಮಾಡುವ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಎಂದು ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ. ಹೇಳಿದ್ದಾರೆ.
ವಕೀಲರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಇಂದು ಸುಳ್ಯ ವಕೀಲರ ಸಂಘದ ವತಿಯಿಂದ ಸುಳ್ಯ ನ್ಯಾಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇವಲ ವಕೀಲರೊಬ್ಬರು ಹೆಲ್ಮೆಟ್ ಧರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣವಿಟ್ಟು ನಡು ರಸ್ತೆಯಲ್ಲಿ ಕಳ್ಳನನ್ನು ಹಿಡಿದು ಬಡಿಯುವ ರೀತಿಯಲ್ಲಿ ವಕೀಲರೊಬ್ಬರಿಗೆ ಹೊಡೆಯುವುದು ಯಾವ ನ್ಯಾಯ. ಇದನ್ನು ಪ್ರಶ್ನಿಸಿ ವಕೀಲರುಗಳು ಪ್ರತಿಭಟನೆ ಮಾಡಿದರೆ ಪೊಲೀಸ್ ಬುದ್ಧಿಯನ್ನು ಉಪಯೋಗಿಸಿ ಪ್ರತಿಭಟನೆ ಮಾಡಿರುವಂತಹ ವಕೀಲರ ಮೇಲೆ ಬೇರೆ ಬೇರೆ ರೀತಿಯ ನಾಲ್ಕು ಪ್ರಕರಣಗಳನ್ನು ದಾಖಲಿಸಿ ವಕೀಲರುಗಳನ್ನು ಧಮನಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಾರೆ.
ಅಲ್ಲದೆ ಹಲ್ಲೆ ಮಾಡಿದಲ್ಲದೆ ಮೂರು ನಾಲ್ಕು ದಿನಗಳ ಬಳಿಕ ಹಲ್ಲೆಗೊಳಗಾದ ವಕೀಲರ ಮೇಲೆ ಕೌಂಟರ್ ಕೇಸ್ ದಾಖಲಿಸಿ ತಮ್ಮ ಬುದ್ಧಿಯನ್ನು ತೋರಿಸುತ್ತಾರೆ.ಆ ರೀತಿ ವಕೀಲರು ಪೊಲೀಸರಿಗೆ ಹಲ್ಲೆ ಮಾಡಿದ್ದಲ್ಲಿ ಅದೇ ದಿನ ದೂರು ದಾಖಲಿಸಿಕೊಳ್ಳಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರು ಸಮಾಜದಲ್ಲಿ ಸಂವಿಧಾನದ ಗೌರವವನ್ನು ಪಾಲಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಅದು ಬಿಟ್ಟು ಈ ರೀತಿ ದೌರ್ಜನ್ಯವೆಸಗುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಎಂ ವೆಂಕಪ್ಪಗೌಡ ದೇಶ ರಕ್ಷಣೆ ಮಾಡುವ ಸೈನಿಕರು ರಸ್ತೆ ಗಿಳಿದು ಪ್ರತಿಭಟನೆ ಮಾಡಿದರೆ ದೇಶದ ರಕ್ಷಣೆ ಹೇಗೆ ಸಾಧ್ಯ, ಅದೇ ರೀತಿ ರಾಜ್ಯದಲ್ಲಿ ಸೈನಿಕರಂತೆ ರಾಜ್ಯವನ್ನು ಮತ್ತು ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರು ರಸ್ತೆಗೆ ಪ್ರತಿಭಟನೆಗೆ ಇಳಿದರೆ ಸಾರ್ವಜನಿಕರ ಗತಿ ಏನು? ಎಂದು ಪ್ರಶ್ನಿಸಿದರು. ಯುವ ವಕೀಲರ ಮೇಲೆ ಪೊಲೀಸರು ಹಲ್ಲೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತಲೆತಗ್ಗಿಸುವಂತಹ ಹೀನ ಕೃತ್ಯವಾಗಿದೆ. ಇದು ಪೊಲೀಸರ ಅತಿರೇಕವಾಗಿದೆ. ಕಾನೂನು ಪಾಲಕರು ಅವರಿಗೆ ಇರುವ ಲಕ್ಷ್ಮಣ ರೇಖೆಯನ್ನು ದಾಟಿ ಈ ರೀತಿಯ ಪ್ರವೃತ್ತಿಯನ್ನು ಮಾಡುವುದು ಸರಿಯಲ್ಲ. ವಕೀಲರ ಮೇಲೆ ದರ್ಪವನ್ನು ತೋರಿಸಿದರೆ ವಕೀಲರು ಯಾರೆಂಬುದನ್ನು ಪೊಲೀಸರಿಗೆ ತೋರಿಸಿ ಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರು ಶಾಂತರು ಮತ್ತು ಶಾಂತಿ ಪ್ರೀಯರು ಅವರನ್ನು ಕೆಣಕಲು ಬಂದರೆ ಸರಿ ಇರುವುದಿಲ್ಲ ಎಂದು ಹೇಳಿದರು. ನಮ್ಮ ರಕ್ಷಣೆಗಾಗಿ ನಾವು ಸುಪ್ರೀಂ ಕೋರ್ಟಿಗೂ ಹೋಗಲು ಸಿದ್ದರಿದ್ದೇವೆ. ಅನಾವಶ್ಯಕವಾಗಿ ವಕೀಲರ ಮೇಲೆ ದೌರ್ಜನ್ಯವಸಿಗಿದರೆ ನ್ಯಾಯಾಲಯವು ಕೂಡ ನಮ್ಮ ಪರವಾಗಿ ಇರುತ್ತದೆ ಎಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು ಪ್ರಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.ಕೊನೆಯಲ್ಲಿ ದೌರ್ಜನ್ಯ ವೆಸಿಗದ ಪೊಲೀಸರಿಗೆ ಧಿಕ್ಕಾರವನ್ನು ಕೂಗಿ, ವಕೀಲರ ರಕ್ಷಣೆ ಕಾಯ್ದೆ ಜಾರಿಯಾಗಲಿ, ವಕೀಲರಿಗೆ ನ್ಯಾಯ ಸಿಗಲಿ, ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾಗಲಿ ಎಂದು ಘೋಷಣೆಯನ್ನು ಕೂಗಿದರು.
ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ವಂದಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ದೀಪಕ್, ಸಾಂಸ್ಕೃತಿಕ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್, ಹಿರಿಯ ವಕೀಲರುಗಳಾದ ಭಾಸ್ಕರ್ ರಾವ್, ರಾಮಕೃಷ್ಣ ಅಮೈ, ರವೀಂದ್ರನಾಥ ರೈ, ಕೇಶವಭೀಮಗುಳಿ, ಜಗದೀಶ್ ಹುದೇರಿ, ದೇವಿಪ್ರಸಾದ್ ಆಳ್ವ, ಸುಕುಮಾರ ಕೊಡ್ತುಗುಳಿ, ದಿನೇಶ್ ನಳಿಯೂರು, ಪ್ರದೀಪ್ ಬೊಳ್ಳೂರು, ಕೃಷ್ಣಪ್ರಸಾದ್ ದೋಳ, ನಳಿನ್ ಕುಮಾರ್ ಕೋಡ್ತುಗುಳಿ, ಮಹೇಶ್ ಕುಮಾರ್ ಸುಳ್ಯ, ಶ್ರೀಹರಿ ಕುಕ್ಕುಡೇಲು ಚಂದ್ರಶೇಖರ ಬಿ ಸೋಣಂಗೇರಿ, ಲೋಕೇಶ್ ಎಂಜೆ ಕಡಬ, ಶ್ರೀಮತಿ ಚಂಪಾ ವಿ, ಲೋಲಾಕ್ಷಿ, ಲಿಖಿತ, ರಂಜಿತ್ ಕುಕ್ಕೆಟ್ಟಿ, ವಿಪುಲ್ ನೀರ್ಪಾಡಿ ಮೊದಲಾದವರು ಭಾಗವಹಿಸಿದ್ದರು.