ಸಾಧಕರಿಗೆ ಸನ್ಮಾನ, ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದ್ರಾಜೆ,ಹಿರಿಯ ವಿದ್ಯಾರ್ಥಿ ಸಂಘ ಇಂದ್ರಾಜೆ ವತಿಯಿಂದ ಶಾಲಾ ವಾರ್ಷಿಕೋತ್ಸವ , ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಡಿ.16 ರಂದು ನಡೆಯಿತು.
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಕೆ.ಪರಮೇಶ್ವರಯ್ಯರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಪಿ.ಶೇಖರರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಇಂದ್ರಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಂತೆ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ.ಸರಕಾರದ ಎಲ್ಲಾ ಸವಲತ್ತುಗಳ ಜೊತೆ ಊರಿನ ಎಲ್ಲಾ ಜನರು ಸಹಕಾರ ನೀಡಿತ್ತಾ ಇದ್ದು ಇದು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ.ಇವತ್ತು ಎಲ್ಲರ ಸಹಕಾರದಿಂದ ಅತ್ಯುತ್ತವಾಗಿ ವಾರ್ಷಿಕೋತ್ಸವ ನಡೆಯುತ್ತಿದೆ.
ಮುಂದೆಯೂ ಎಲ್ಲರ ಸಹಕಾರವನ್ನು ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುವರ್ಣ ಚಂದ್ರಿಕಾರವರು ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹಶಿಕ್ಷಕಿ ಪ್ರೇಮಲತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಾರ್ಷಿಕೋತ್ಸವಕ್ಕೆ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯ ಹರ್ಷ ಭಟ್, ಎಣ್ಮೂರು ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ ಕೆ, ಕ.ರಾ.ಪ್ರಾ.ಶಾ.ಶಿ.ಸಂ ಸುಳ್ಯ ಶಾಖೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಕೆ,ಕಳಂಜ ಬಾಳಿಲ ವ್ಯ.ಸೇ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು , ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಮ ಕೆ. ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕ ಲೋಕೇಶ್ ಬೆಳ್ಳಿಗೆ ಕಾರ್ಯಕ್ರಮ ನಿರೂಪಿಸಿ,ಶಿವರಾಮ ಕೆ.ವಂದಿಸಿದರು.
ಬೆಳಿಗ್ಗೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಶಿವರಾಮ ಕೆ.ಯವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು,ಶಾಲಾ ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಜನ ಸಾಧಕರನ್ನು ಸನ್ಮಾನಿಸಲಾಯಿತು.
ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿದ್ದು ಗೋಕಾಕದ ನಾಡಿನ ಸಮಾಚಾರ ಸೇವಾ ಸಂಘ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡಮಾಡಿದ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಸ್ವೀಕರಿಸಿದ ಕೂಸಪ್ಪ ಗೌಡ ಮುಗುಪ್ಪು,ನಿವೃತ್ತ ಅಂಚೆ ಪಾಲಕ ರಾಧಾಕೃಷ್ಣ ಭಟ್, ಯಕ್ಷಗಾನ ಕಲಾವಿದರಾದ ಸುಂದರ ಇಂದ್ರಾಜೆಯವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಭಾ ಕಾರ್ಯಕ್ರಮದ ಮೊದಲು ಅಂಗನವಾಡಿ ಪುಟಾಣಿಗಳು ಹಾಗೂ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳಿಸಿದವು. ಹಲವು ವಿಧದ ನೃತ್ಯ,ನೃತ್ಯ ರೂಪಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆದವು.ಸಭಾ ಕಾರ್ಯಕ್ರಮ ನಡೆದ ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ ವಿದ್ಯಾಶ್ರೀ ಯಕ್ಷಗಾನ ಕಲಾವಿದರು ಹಾಗೂ ಊರ ಪರವೂರ ಕಲಾವಿದರಿಂದ ಸುಂದರ ಇಂದ್ರಾಜೆ ನಿರ್ದೇಶನದ ಮಹಿಷ ವಧೆ ಯಕ್ಷಗಾನ ನಡೆಯಿತು.