ಶ್ರೀ ಶೀರಾಡಿ ಯಾನೆ ರಾಜನ್ ದೈವಸ್ಥಾನ ಮುಂಡೋಡಿ ಇಲ್ಲಿ ಶ್ರೀ ದೈವಕ್ಕೆ ನವೀಕೃತ ಮೂಲಸ್ಥಾನದ ಸಮರ್ಪಣೆ ಮತ್ತು ಪುನಃ ಪ್ರತಿಷ್ಠಾ ಕಲಶೋತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

0

ಭಗವಂತನ ನಿರ್ದೇಶನದಂತೆ, ಶ್ರಮಿಕರ ಶ್ರಮದೊಂದಿಗೆ ಸುಂದರ ದೈವಸ್ಥಾನ ನಿರ್ಮಾಣವಾಗಿದೆ : ಡಾ| ಪ್ರಭಾತ್ ಜೈನ್

ಉಭಯ ಗ್ರಾಮಗಳನ್ನು ಸೇರಿಸಿದ ದೈವ ಶೀರಾಡಿ ದೈವ.
ಭಗವಂತನ ನಿರ್ದೇಶನದಂತೆ, ಶ್ರಮಿಕರ ಶ್ರಮದೊಂದಿಗೆ ಸುಂದರ ದೈವಸ್ಥಾನ ಇಲ್ಲಿ ನಿರ್ಮಾಣವಾಗಿದೆ ಎಂದು
ಜೈನ‌ ಕಾಲೇಜು ಮೂಡಬಿದಿರೆ ಇಲ್ಲಿಯ ಪ್ರಾಂಶುಪಾಲರಾದ ಡಾ| ಪ್ರಭಾತ್ ಜೈನ್ ಬಲ್ನಾಡುಪೇಟೆ ಹೇಳಿದರು.

ಅವರು ಶೀರಾಡಿ ಯಾನೆ ರಾಜನ್ ದೈವಕ್ಕೆ ನವೀಕೃತ ಮೂಲಸ್ಥಾನದ ಸಮರ್ಪಣೆ ಮತ್ತು ಪುನಃ ಪ್ರತಿಷ್ಠಾ ಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.

ಶಿರಾಡಿ ದೈವದ ಬಗ್ಗೆ ಶಾಸನದಲ್ಲಿ‌ಉಲ್ಲೇಖವಿದೆ‌. ಮಾತೃಮೂಲಿಯಾದ ಶೀರಾಡಿ ದೈವ ಈ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನ್ಯಾಯತೀರ್ಮಾನ ಮಾಡುವಂತಹ ಈ ದೈವವನ್ನು ರಾಜನ ಪ್ರತಿನಿಧಿಯಾಗಿ ಕಂಡ ಕಾರಣ ರಾಜನ್ ದೈವ ಎಂದು ಕರೆಯಲಾಗುತ್ತದೆ. ಇಲ್ಲಿ ನೇಮಾಧಿಗಳು ನಡೆಯದೆ ಇದ್ದರೂ ಭಂಡಾರ ಮಾತ್ರ ಇಡುವ ಜಾಗ. ಹಾಗಿದ್ದರೂ ದೈವಕ್ಕೆ ಹೇಗೋ ಬೇಕೋ ಹಾಗೆ ನಿರ್ಮಾಣವಾಗಿರುವ ದೈವಸ್ಥಾನದ ನಿರ್ಮಾಣ ದೈವದ ಕೃಪೆಯಿಂದ‌ ಆಗಿದೆ ಎಂದು ಅವರು ಹೇಳಿದರು.

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮುಂಡೋಡಿ‌ ಮಾಳಿಗೆ ಶ್ರೀ ರಾಜನ್ ಯಾನೆ ಶೀರಾಡಿ ದೈವಸ್ಥಾನ ಪುನರ್ ನವೀಕರಿಸಲ್ಪಟ್ಟಿದ್ದು, ದೈವಕ್ಕೆ ನವೀಕೃತ ಮೂಲಸ್ಥಾನದ ಸಮರ್ಪಣೆ ಹಾಗೂ ಶೀರಾಡಿ ದೈವದ ಪುನಃ ಪ್ರತಿಷ್ಠಾ ಕಲಶ ಸಹಿತ ವಿವಿಧ ಕಾರ್ಯಕ್ರಮಗಳು ಡಿ.27, 28, 29ರಂದು ನಡೆಯಿತು.


ಡಿ.27ರಂದು ಬೆಳಿಗ್ಗೆ ಹಸಿರುವಾಣಿ‌ ಮತ್ತು ಸಂಜೆ ದೈವದ ನೂತನ ಭಂಡಾರದ ಮೆರವಣಿಗೆ ನಡೆಯಿತು. ಬಳಿಕ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ಬಿಂಬ ಪರಿಗ್ರಹ, ಪಶುದಾನ ಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಿತು. ಡಿ‌28ರಂದು ಗಣಪತಿ ಹವನ, ತ್ರಿಕಾಲ ಪೂಜೆ, ಬಿಂಬಶುದ್ಧಿ, ಸ್ಥಳಶುದ್ಧಿ, ಅನುಜ್ಞಾ ಕಲಶ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಜೀವೋದ್ವಾಸನೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಅಧಿವಾಸ ಹೋಮ, ಕಲಶಪೂಜೆ, ದಾನ್ಯಾಧಿವಾಸ, ತ್ರಿಕಾಲ ಪೂಜೆ ನಡೆಯಿತು.

ಡಿ.29ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಜೀವಕಲಶಾಭಿಷೇಕ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ನಿತ್ಯನೈಮಿತ್ಯಾದಿಗಳ‌ ನಿರ್ಣಯ ನಡೆಯಿತು.‌ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ‌ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಅನ್ನಪೂರ್ಣೇಶ್ವರಿ ಯೋಗೇಶ್ವರ ಸಿದ್ದಮಠ ದೇಶೆಕೋಡಿ ಇಲ್ಲಿಯ ರಾಜೇಶ್ ನಾಥ್ ದೇಶೆಕೋಡಿ, ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಪಂಚಸ್ಥಾಪನೆಯ ಮೊಕ್ತೇಸರರಾಗಿದ್ದ ಯುವರಾಜ್ ಜೈನ್ ಬಲ್ನಾಡುಪೇಟೆ, ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಬಾಳಿಲ, ಮಿತ್ತೂರು ನಾಯರ್ ನ ದೊಡ್ಡ ಪೂಜಾರಿಗಳಾದ ರವಿರಾಂ ರೈ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಮುಖ್ಯ ಅತಿಥಿಗಳಾಗಿದ್ದರು.

ಪ್ರಾಸ್ತಾವಿಕವಾಗಿ ಪ್ರಧಾನ ಕಾರ್ಯದರ್ಶಿ ಶಾಂತಾಪ್ಪ ರೈ ಅಂಗಡಿಮಜಲು ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ರಾಮಚಂದ್ರ ಹಲ್ದಡ್ಕ ವಂದಿಸಿದರು. ಉಪನ್ಯಾಸಕ ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಮರ ಕೊಡುಗೆಯಾಗಿ ನೀಡಿದವರನ್ನು ಮತ್ತು ಹೆಚ್ಚು ದಿನ ಶ್ರಮದಾನ ಮಾಡಿದವರನ್ನು ಗೌರವಿಸಲಾಯಿತು.