ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ
ಎಣ್ಮೂರು ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ರಂಗಮಂದಿರ, ವೆಹಿಕಲ್ ಶೆಡ್, ಶುದ್ಧ ಕುಡಿಯುವ ನೀರಿನ ಫಿಲ್ಟರ್ ಮತ್ತು ಕೈ ತೊಳೆಯುವ ನೀರಿನ ಘಟಕ ಇವುಗಳ ಉದ್ಘಾಟನಾ ಸಮಾರಂಭ ಡಿ. 29 ರಂದು ನಡೆಯಿತು. ಕೇರ್ಪಡ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಗೌಡ ನಡುಬೈಲು ನೂತನ ರಂಗಮಂದಿರ ಉದ್ಘಾಟಿಸಿ ಶುಭ ಹಾರೈಸಿದರು.
ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ, ಸದಸ್ಯೆ ಶ್ರೀಮತಿ ಪುಷ್ಪಲತಾ ಮತ್ತು ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ಶೆಟ್ಟಿ ವೆಹಿಕಲ್ ಶೆಡ್, ಶುದ್ಧ ಕುಡಿಯುವ ನೀರಿನ ಫಿಲ್ಟರ್ ಮತ್ತು ಕೈ ತೊಳೆಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪದ್ಮನಾಭ ಗೌಡ ಪೂದೆ ವಹಿಸಿದ್ದರು.
ವೇದಿಕೆಯಲ್ಲಿ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ, ಶ್ರೀಮತಿ ಸಂಧ್ಯಾ ಕುಮಾರಿ, ಜಯಂತ ಕೆ , ತಾಯಂದಿರ ಸಮಿತಿ ಅಧ್ಯಕ್ಷೆ ಶ್ರೀಮತಿ ನಯನಾ ರೈ, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರಾಮಕೃಷ್ಣ ಭಟ್ ಚೂಂತಾರು ಮಾತನಾಡಿ
ಬಾಲ್ಯದ ಶಿಕ್ಷಣ ನಮ್ಮ ಭವಿಷ್ಯದ ಜೀವನಕ್ಕೆ ತಳಹದಿ. ಕೇವಲ ಹಣ ಅಥವಾ ಆಸ್ತಿ ಸಂಪಾದನೆಗಿಂತ ಜ್ಞಾನ ಗಳಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿಗಳಾಗಿ ದೇಶದ ಪ್ರಗತಿಗೆ ಕೈ ಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ರವರು ಎಣ್ಮೂರು ಪ್ರೌಢಶಾಲೆ ತಾಲೂಕಿನ ಒಂದು ಉತ್ತಮ ಪ್ರೌಢ ಶಾಲೆಯಾಗಿದ್ದು, ಎಲ್ಲಾ ವಿಭಾಗಗಳಲ್ಲೂ ಮುಂದಿರುವುದು ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಶಾಲಾ ವಾರ್ಷಿಕ ವರದಿ ವಾಚಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಕವಿತಾ ಡಿ.ಎಂ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಶ್ರೀಮತಿ ಉಷಾ ಕೆ.ಎಸ್ ಮತ್ತು ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮೋಹನ ಗೌಡ, ಶ್ರೀಮತಿ ದಿವ್ಯಾ ಎಂ.ಕೆ. ಶ್ರೀಮತಿ ಗುಣಶ್ರೀ, ರಾಮಚಂದ್ರ ಗೌಡ ಪಿ.ಎನ್, ಶ್ರೀಮತಿ ರೂಪಲತಾ ಮತ್ತು ಕು. ಪ್ರೇಮಲತಾ ಸಹಕರಿಸಿದರು.