ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಹಾಗೂ ಸೆಂಟರ್ ಸ್ಟೇಜ್ ಬೆಂಗಳೂರು ಇವರು ಕನ್ನಡ ಸಾಂಸ್ಕೃತಿಕ ಲೋಕದ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣರವರ ಹೆಸರಿನಲ್ಲಿ ಕೊಡಮಾಡುವ ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಗೆ ಸುಳ್ಯದ ರಂಗಮನೆಯ ರೂವಾರಿ, ಪ್ರಸಿದ್ಧ ರಂಗ ನಿರ್ದೇಶಕ ಡಾ|ಜೀವನ್‌ರಾಂ ಸುಳ್ಯರವರು ಭಾಜನರಾಗಿದ್ದಾರೆ.
ಕಳೆದ ವರ್ಷದಿಂದ ಈ ಪ್ರಶಸ್ತಿ ನೀಡುತ್ತಿದ್ದು, ಕಳೆದ ವರ್ಷ ಈ ಪ್ರಶಸ್ತಿಯನ್ನು ಖ್ಯಾತ ಅಭಿನೇತ್ರಿ ಅರುಂಧತಿ ನಾಗ್ ಅವರಿಗೆ ನೀಡಲಾಗಿತ್ತು.
ಜೀವನ್‌ರಾಂರವರು ಕಳೆದ ೨೩ ವರ್ಷಗಳ ಹಿಂದೆ ಸುಳ್ಯದ ಹಳೆಗೇಟಿನಲ್ಲಿ ಸ್ಥಾಪಿತವಾದ ತನ್ನ ವಾಸದ ಮನೆ ರಂಗಮನೆಯನ್ನು ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿಸಿ
ಸಾವಿರಾರು ಪ್ರೇಕ್ಷಕ ಬಳಗವನ್ನು ಸೃಷ್ಟಿಸಿ ರಾಜ್ಯದ ಗಮನ ಸೆಳೆದವರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಕಾರ್ಕಳ ಯಕ್ಷ ರಂಗಾಯಣದ ಪ್ರಥಮ ನಿರ್ದೇಶಕರಾಗಿ ದುಡಿದವರು. ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಕೊಂಡಿರುವ ಜೀವನ್ ರಾಂ ಪ್ರಸ್ತುತ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಫೆ. ೧೩ರಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಶಸ್ತಿಯು ೫೦,೦೦೦ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ.