ಆಸ್ಪತ್ರೆಗೆ ದಾಖಲು : ಪೋಲೀಸ್ ದೂರು
ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೂಲೆ ಮಜಲು ಗೌತಮ್ ರವರ ಮೇಲೆ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಪೆರಾಜೆ ಗ್ರಾಮ ಪಂಚಾಯತಿ ಸದಸ್ಯ ಸುಭಾಶ್ ಚಂದ್ರ ಬಂಗಾರುಕೋಡಿ ಹಾಗೂ ಬಿಜೆಪಿ ಮುಖಂಡ ಗುಡ್ಡೆಮನೆ ಮಹಾಬಲಾ ಎಂಬುವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಗಾಯಗೊಂಡ ಗೌತಮ್ ಕೊಡಗು ವೈದ್ಯಕೀಯ ಭೋದಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಎ.22 ರಂದು ಸಂಜೆ ಗೌತಮ್ ರವರು ಚುನಾವಣಾ ಪ್ರಚಾರ ಕಾರ್ಯ ನಡೆಸಿ ಮನೆಗೆ ಬೈಕ್ ನಲ್ಲಿ ಮರಳುತ್ತಿದ್ದಾಗ ಕೋಟೆ ಪೆರಾಜೆ ಬಸ್ ಸ್ಟಾಪ್ ಬಳಿ ಸುಭಾಷ್ ಚಂದ್ರ ಬಂಗಾರುಕೋಡಿ ಮತ್ತು ಮಹಾಬಲ ಗುಡ್ಡೆ ಮನೆಯವರು ಅಡ್ಡ ಹಾಕಿ ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಹೇಳಿ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ಸಾರೆಂದು ಹೇಳಲಾಗಿದ್ಸು, ಹಲ್ಲೆಗೊಳಗಾದ ಗೌತಮ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗೌತಮ್ ನೀಡಿದ ದೂರಿನಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸುಭಾಷ್ ಚಂದ್ರ ಬಂಗಾರುಕೋಡಿ ಹಾಗೂ ಮಹಾಬಲ ಗುಡ್ಡೆ ಮನೆ ಇವರ ವಿರುದ್ದ IPC ಸೆಕ್ಷನ್ 427,324,323,504 ರಡಿ FIR ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮುಖಂಡರಾದ ತೆನ್ನಿರ ಮೈನಾ,ಹೊಸೂರು ಸೂರಜ್,ಪೆರುಮಂಡ ಮನು ಸೇರಿದಂತೆ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗೌತಮ್ ಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಖಂಡಿಸಿದ್ದಾರೆ.
ಘಟನೆಯ ಕುರಿತು ಗ್ರಾ.ಪಂ. ಸದಸ್ಯ ಸುಭಾಶ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, ಕಾಂಗ್ರೆಸ್ ನವರು ಕಾಲೊನಿಯಲ್ಲಿ ಮದ್ಯ ಹಂಚುತ್ತಾರೆ ಎಂಬ ಮಾಹಿತಿ ಮೇರೆಗೆ ನಾವು ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿದೆವು. ಆದರೆ ಹಲ್ಲೆ ನಡೆಸಿಲ್ಲ.ಆ ದಿನ ರಾತ್ರಿ ಇದನ್ನು ಇಲ್ಲಿಗೆ ಮುಗಿಸಿ ಬಿಡೋಣ ಎಂದು ಅವರೇ ಹೇಳಿ, ಇದೀಗ ಪೋಲೀಸ್ ದೂರು ನೀಡಿದ್ದಾರೆ ಎಂದು ಸುದ್ದಿಗೆ ತಿಳಿಸಿದ್ದಾರೆ.