ಸಂಸ್ಕಾರ ಎಲ್ಲಕ್ಕಿಂತಲೂ ಹಿರಿದಾದ ಮಾಧ್ಯಮ:ಶಿವ ಸುಜ್ಞಾನ ಶ್ರೀ

0

ಅಷ್ಟಬಂಧ ಬ್ರಹ್ಮಕಲಶದಿಂದ ಸಾನಿಧ್ಯಕ್ಕೆ ಬೆಳಕು:ಧರ್ಮಪಾಲನಾಥ ಶ್ರೀ

ಮಂಡೆಕೋಲು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

ಈ ಶರೀರ, ನಾವು ಸಂಪಾದಿಸಿದ ಸಂಪತ್ತು ಯಾವುದೂ ಶಾಶ್ವತವಲ್ಲ. ಸಂಪಾದನೆಯ ಒಂದಂಶವನ್ನು ದೇವರಿಗೆ ಸಮರ್ಪಣೆ ಮಾಡಿದರೆ ಭಗವಂತನ ಸಾಕ್ಷಾತ್ಕಾರ ಸಿಗುತ್ತದೆ. ಅದೇ ರೀತಿ ಬಾಲ್ಯದಿಂದಲೇ ಸಿಕ್ಕಿದ ಸಂಸ್ಕಾರಯುತ ಶಿಕ್ಷಣ ಕೊನೆಯವರೆಗೂ ನಮ್ಮನ್ನು ಕಾಪಾಡುತ್ತದೆ. ಸಂಸ್ಕಾರ ಶಿಕ್ಷಣ ಎಲ್ಲಕ್ಕಿಂತಲೂ ಹಿರಿದಾದ ಮಾಧ್ಯಮ ಎಂದು ಅರಕಲಗೂಡು ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಹೇಳಿದ್ದಾರೆ.


ಅವರು ಎ.೨೭ರಂದು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮ ದೀಪ ಬೆಳಗಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.


ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರ ತರಲಾದ ‘ಸಿರಿ ಸಂಪದ’ ಸ್ಮರಣ ಸಂಚಿಕೆಯನ್ನು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಯವರು ಬಿಡುಗಡೆಗೊಳಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ಅಷ್ಟಬಂಧ ಬ್ರಹ್ಮಕಲಶ ದಿಂದ ಸಾನಿಧ್ಯ ಬೆಳಗುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಚಿಂತೆ ಇz ಇರುತ್ತದೆ. ಅದರ ಮುಕ್ತಿಗೆ ದೇವರ ಮೊರೆ ಹೋಗಬೇಕು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ವಹಿಸಿದ್ದರು.
ಯುವ ವಾಗ್ಮಿ ಶ್ರೀದೇವಿ ಪುತ್ತೂರು ಉಪನ್ಯಾಸ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ನಾಯಕ್ ಮುರೂರು, ನೆಲ್ಲಿತಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ, ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಉಪಸ್ಥಿತರಿದ್ದರು.


ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರ ತಂದ ಸ್ಮರಣ ಸಂಚಿಕೆ `ಸಿರಿ ಸಂಪದ’ ದ ಸಂಪಾದಕ ಆರ್.ಸಿ. ಭಟ್ ಸ್ಮರಣ ಸಂಚಿಕೆ ಕುರಿತು ಮಾತನಾಡಿದರು. ಸಂಪಾದಕ ಮಂಡಳಿ ಸದಸ್ಯ ಪತ್ರಕರ್ತ ಗಣೇಶ್ ಮಾವಂಜಿ ಬಿಡುಗಡೆ ಸಂದರ್ಭ ವೇದಿಕೆಯಲ್ಲಿದ್ದರು.


ವೈಶಾಲಿ ಮತ್ತು ತಂಡ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಕಣೆಮರಡ್ಕ ಪ್ರಾಸ್ತಾವಿಕ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೇನಾಜೆ ವಂದಿಸಿದರು.
ಗಣೇಶ್ ಆಚಾರ್ಯ ಜಾಲ್ಸೂರು ಹಾಗೂ ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.


ಮಂಡೆಕೋಲು ಪುರವಾಸ ಎಂಬ ಕನ್ನಡ ಭಕ್ತಿಗೀತೆ ಪೋಸ್ಟರ್ ಕೂಡಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಸಭಾ ಕಾರ್ಯಕ್ರಮದ ಬಳಿಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಭಕ್ತಿ ಸಂಗೀತ ಮೂಡಿ ಬಂತು. ಸಭಾ ಕಾರ್ಯಕ್ರಮಕ್ಕೂ ಮೊದಲು ಸ್ಥಳೀಯರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.