ವಯನಾಡು ಸಂತ್ರಸ್ತರಿಗೆ ಸುಳ್ಯ ಸೇವಾ ಭಾರತಿ ವತಿಯಿಂದ ಅಗತ್ಯ ವಸ್ತುಗಳ ಸಾಮಾಗ್ರಿಗಳ ಸಂಗ್ರಹ ಕಾರ್ಯ

0

ಸುಳ್ಯ ನಗರದಾದ್ಯಂತ ಅಂಗಡಿ ಅಂಗಡಿಗಳಿಗೆ ತೆರಳಿ ಸಹಾಯ ಸಂಗ್ರಹಿಸಿದ ಕಾರ್ಯಕರ್ತರುಗಳು

ಕೇರಳದ ವಯನಾಡಿನಲ್ಲಿ ಸಂಭವಿಸಿರುವ ದುರಂತ ಸ್ಥಳದಲ್ಲಿರುವ ಸಂತ್ರಸ್ತರಿಗಾಗಿ ಸುಳ್ಯ ಸೇವಾ ಭಾರತಿ ವತಿಯಿಂದ ನಗರದ ಅಂಗಡಿ ಅಂಗಡಿಗಳಿಗೆ ತೆರಳಿ ಅಗತ್ಯ ವಸ್ತುಗಳ ಸಾಮಾಗ್ರಿಗಳ ಸಂಗ್ರಹ ಕಾರ್ಯ ಆ.೨ರಂದು ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಅಂಗಡಿ ಮಾಲಕರುಗಳು ಸಂಪೂರ್ಣ ಸಹಕಾರ ನೀಡಿ ಅಕ್ಕಿ, ಸಾಬೂನು, ಸಕ್ಕರೆ ಮುಂತಾದ ಅವಶ್ಯಕ ಸಾಮಾಗ್ರಿಗಳನ್ನು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಕಾರ್ಯಕರ್ತರು ಈಗಾಗಲೇ ಸೇವಾಭಾರತಿಯ ಹಲವಾರು ಕಾರ್ಯಕರ್ತರುಗಳು ದುರಂತ ಸ್ಥಳದಲ್ಲಿ ಉಪಸ್ಥಿತರಿದ್ದು ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ.೩ರಂದು ಸುಳ್ಯದಿಂದ ಸುಮಾರು ೧೨ ಕ್ಕೂ ಹೆಚ್ಚು ಮಂದಿ ಘಟನಾ ಸ್ಥಳಕ್ಕೆ ತೆರಳುತ್ತಿದ್ದು ಅಲ್ಲಿ ನಮ್ಮ ಕಾರ್ಯಕರ್ತರುಗಳು ಅಗತ್ಯ ವಸ್ತುಗಳ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವಂತಹ ಕೆಲಸ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇವಾ ಭಾರತಿ ಸಂಘಟನೆಯ ಮುಖಂಡರುಗಳಾದ ನವೀನ ಜಟ್ಟಿಪಳ್ಳ, ಸಾಗರ್ ರೈ, ನಾಗರಾಜ್, ಮಧುಸೂದನ್, ಪ್ರಕಾಶ್ ಪಚ್ಚು, ಗುರುದತ್ತ್, ಗಣೇಶ್ ಮೊದಲಾದವರು ಭಾಗವಹಿಸಿದ್ದರು. ಇದರ ಸಾರಥ್ಯವನ್ನು ಮನೋಜ್ ರವರು ವಹಿಸಿಕೊಂಡಿದ್ದರು. ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರು ನಾರಾಯಣ್, ಕಾರ್ಯದರ್ಶಿ ಮನೋಹರ್ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ.