ಎಡಮಂಗಲ ಸಂಪರ್ಕಿಸುವ ಮಾಲೆಂಗಿರಿ ಸೇತುವೆ ಹಾನಿ ಸಂಪರ್ಕ ಬಂದ್

0

ಸರಕಾರಿ ಬಸ್, ವಾಹನಗಳಿಲ್ಲದೆ ಪರದಾಡಿದ ವಿದ್ಯಾರ್ಥಿಗಳು ಸಾರ್ವಜನಿಕರು

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ರೂ. 50 ಲಕ್ಷ ಅನುದಾನ ಘೋಷಣೆ

ಆ. 13ರಂದು ಸುರಿದ ಮಳೆಗೆ ಎಡಮಂಗಲ ಗ್ರಾಮದ ಮಾಲೆಂಗಿರಿ ಮುಖ್ಯ ರಸ್ತೆಯ ಸೇತುವೆಯ ಅಡಿಭಾಗದ ಕಲ್ಲು, ಮಣ್ಣು ನೀರಿನಲ್ಲಿ ಕೊಚ್ಚಿಹೋಗಿದ್ದು, ಎಡಮಂಗಲ ಭಾಗಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಆ. 16ರಂದು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.


ಸೇತುವೆ ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗಿದೆ. ಸೇತುವೆಯ ಅಡಿಭಾಗದಲ್ಲಿ ಮತ್ತು ಎರಡೂ ಬದಿಗಳಲ್ಲಿ ತಡೆಗೋಡೆ ಇರಲಿಲ್ಲ. ಆ. 13ರಂದು ರಾತ್ರಿ ಹೊಳೆಯಲ್ಲಿ ನೀರು ತುಂಬಿ ಹರಿದಾಗ ಸೇತುವೆಯ ಅಡಿಭಾಗದ ಕಲ್ಲುಗಳು ಕೊಚ್ಚಿಹೋಗಿ ಸಮೀಪದ ತೋಟದಲ್ಲಿ ರಾಶಿಬಿದ್ದಿತ್ತು. ಆ. 14ರಂದು ಬೆಳಿಗ್ಗೆ ಎಡಮಂಗಲ ಹಾಲು ಸೊಸೈಟಿಗೆ ಹಾಲು ಕೊಂಡೊಯ್ಯುವವರು ಕಲ್ಲಿನ ರಾಶಿಯನ್ನು ಗಮನಿಸಿ ಸೇತುವೆ ಅಡಿಭಾಗವನ್ನು ವೀಕ್ಷಿಸಿದಾಗ ಘಟನೆ ತಿಳಿಯಿತು. ಬಳಿಕ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರುರವರು ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಕರೆಮಾಡಿ ವಿಷಯ ತಿಳಿಸಿದರೆನ್ನಲಾಗಿದೆ. ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಗೋಪಾಲ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸೇತುವೆಯ ಮೇಲೆ ಸಂಚರಿಸದಂತೆ ರಸ್ತೆಯ ಎರಡೂ ಬದಿಗಳಲ್ಲಿ ಕಲ್ಲುಕಟ್ಟಿ ರಸ್ತೆಯನ್ನು ಬಂದ್ ಮಾಡಿದರು.

ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳ ಪರದಾಟ

ನಿಂತಿಕಲ್ಲು ಅಲೆಕ್ಕಾಡಿ ಎಡಮಂಗಲ ರಸ್ತೆ ಬಂದ್
ಮಾಡಿದ್ದರಿಂದ ನಿಂತಿಕಲ್ಲು ಅಲೆಕ್ಕಾಡಿ ಭಾಗದಿಂದ ಎಡಮಂಗಲ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಪರ್ಯಾಯ ರಸ್ತೆಯಾಗಿ ಕಲ್ಲೆಂಬಿ ಎಡಮಂಗಲ ರಸ್ತೆಯಿದ್ದರೂ ಆ ರಸ್ತೆ ಕೆಟ್ಟು ಹೋಗಿ ಸಂಚರಿಸಲು ಸಾಧ್ಯವಿಲ್ಲದಂತಾದುದರಿಂದ ಎಡಮಂಗಲಕ್ಕೆ ಬರುವ ಮತ್ತು ಹೋಗುವ 5 ಸರಕಾರಿ ಬಸ್ಸುಗಳು ಸ್ಥಗಿತಗೊಂಡಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಕಾಣಿಯೂರು ಚಾರ್ವಕ ಮೂಲಕ ಅಥವಾ ಪುಲಿಕುಕ್ಕು ಮೂಲಕ ಎಡಮಂಗಲಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ರೂ. 50ಲಕ್ಷ ಅನುದಾನ ಘೋಷಣೆ

ಆ. 16ರಂದು ಶಾಸಕಿ ಭಾಗೀರಥಿ ಮುರುಳ್ಯ ಮಾಲೆಂಗಿರಿಗೆ ಭೇಟಿ ನೀಡಿ ಸೇತುವೆಯನ್ನು ವೀಕ್ಷಿಸಿ ಸ್ಥಳದಲ್ಲೇ ರೂ. 50 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದ್ದರಲ್ಲದೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ರಿಗೆ ಕರೆ ಮಾಡಿ ರೂ. 1 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಮತ್ತು ರೂ. 50 ಲಕ್ಷ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅನುದಾನ ಇರಿಸಿದ್ದು, ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ ಸೇರಿದಂತೆ ಅನೇಕ ಮಂದಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.