ಜಾಲ್ಸೂರಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಪ್ರಯುಕ್ತ ಮಾನವ ಸರಪಳಿ

0

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಸೆ. 15 ರಂದು ದೇಶದ ನಾಗರಿಕರಿಗೆ ಹಾಗೂ ಕರ್ನಾಟಕದ ನಾಗರಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕನಕಮಜಲಿನಿಂದ ಸಂಪಾಜೆಯವರೆಗೆ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಜಾಲ್ಸುರಿನಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಪಯಸ್ವಿನಿ ಪ್ರೌಢ ಶಾಲೆಯಿಂದ ಬ್ಯಾಂಡ್ ವಾಲಗದೊಂದಿಗೆ ವಿದ್ಯಾರ್ಥಿಗಳು ಜಾಲ್ಸುರು ಮುಖ್ಯ ರಸ್ತೆಗೆ ಮೆರವಣಿಗೆಯಲ್ಲಿ ಆಗಮಿಸಿದರು. ಬಳಿಕ ರಸ್ತೆಯ ಬದಿಯಲ್ಲಿ ಎಲ್ಲರೂ ಸರತಿ ಸಾಲಿನಲ್ಲಿ ನಿಂತರು.

ಆರಂಭದಲ್ಲಿ ಪಯಸ್ವಿನಿ ಪ್ರೌಢ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಳಿಕ ಪಯಸ್ವಿನಿ ಪ್ರೌಢ ಶಾಲಾ ಶಿಕ್ಷಕ ಕುಮಾರ್ ಲಮಾಣಿ ಪ್ರಜಾಪ್ರಭುತ್ವ ದಿನ ಮತ್ತು ಸಂವಿಧಾನದ ಬಗ್ಗೆ ಮಾತನಾಡಿದರು. ಸಂವಿಧಾನ ಪ್ರಸ್ತಾವನೆ ಓದಿದ ಬಳಿಕ ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದು ನಿಲ್ಲಲಾಯಿತು. ಬಳಿಕ ಕೈಗಳನ್ನು ಮೇಲೆತ್ತಿ “ಜೈ ಹಿಂದ್ ಜೈ ಕರ್ನಾಟಕ” ಘೋಷಣೆ ಕೂಗಿದರು.

ಹಿರಿಯ ಸಹಾಯಕ ತೋಟಗಾರಿಕ ಅಧಿಕಾರಿ ಶ್ರೀಮತಿ ಸುಹಾನ, ತೋಟಗಾರಿಕೆ ಇಲಾಖೆಯ ಅಧಿಕಾರಿ ಅರಬಣ್ಣ ಪೂಜೇರಿ, ಜಾಲ್ಸುರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಪಿಡಿಓ ಚೆನ್ನಪ್ಪ ನಾಯ್ಕ, ಸಿಬ್ಬಂದಿ ವರ್ಗ, ಪಯಸ್ವಿನಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲತಾ, ಪಯಸ್ವಿನಿ ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಕದಿಕಡ್ಕ ಶಾಲಾ ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು, ಶುಶ್ರೂಷಿಕೀಯರು, ಆಶಾ ಕಾರ್ಯಕರ್ತೆಯರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ವರ್ತಕ ವೃಂದ, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಊರಿನವರು ಭಾಗವಹಿಸಿದ್ದರು.