ಕಲ್ಚರ್ಪೆ ಕಸದ ಸಮಸ್ಯೆ ಬಗ್ಗೆ ನನ್ನ ಮೇಲೆ ಆರೋಪ ಮಾಡಿದವರು ಸತ್ಯ ಪ್ರಮಾಣಕ್ಕೆ ಬರಲಿ : ವಿನಯ ಕುಮಾರ್ ಕಂದಡ್ಕ ಪತ್ರಿಕಾಗೋಷ್ಠಿ

0

ಅಲ್ಲಿಯ ಮೂಲ ನಿವಾಸಿಗಳಿಂದ ತೊಂದರೆಯಾಗುತ್ತಿಲ್ಲ. ಆದರೆ ಹೊರಗಿನಿಂದ ಬಂದವರು ಅವಾಂತರಕ್ಕೆ ಕಾರಣ

ಕಲ್ಲುಚರ್ಪೆ ಪರಿಸರದಲ್ಲಿ ಕೆಲವು ದಿನಗಳಿಂದ ಉಂಟಾಗುತ್ತಿರುವ ಗೊಂದಲಗಳಿಗೆ ಆ ಪ್ರದೇಶದ ಮೂಲ ನಿವಾಸಿಗಳು ಕಾರಣರಲ್ಲ. ಹೊರಗಿನಿಂದ ಬಂದಿರುವ ಇಬ್ಬರು ವ್ಯಕ್ತಿಗಳು ಈ ಎಲ್ಲಾ ರಂಪಾಟಗಳನ್ನು ಮಾಡುತ್ತಿದ್ದಾರೆ.
ರಾಜಕೀಯ ದ್ವೇಷದಿಂದ ಆ ವ್ಯಕ್ತಿಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.
ಅವರು ನನ್ನ ಮೇಲೆ ಹೊರಿಸಿರುವ ಆರೋಪ ಸತ್ಯಕ್ಕೆ ದೂರವಾದದ್ದು.
ಕಲ್ಲುಚರ್ಪೆಯ ಕಸದಿಂದ ನಾನು ರಸ ಪಡೆಯುತ್ತಿದ್ದೇನೆ ಮತ್ತು ಕಲ್ಲುಚರ್ಪೆ ನನಗೆ ಚಿನ್ನದ ಮೊಟ್ಟೆ ಇಡುವ ಜಾಗವಾಗಿದೆ ಎಂದೆಲ್ಲಾ ಆರೋಪವನ್ನು ನನ್ನ ಮೇಲೆ ಮಾಡುತ್ತಿದ್ದಾರೆ.ಆ ರೀತಿ ಅವರಲ್ಲಿ ಇದ್ದರೆ ಅಲ್ಲೇ ಪಕ್ಕದಲ್ಲಿರುವ ಶ್ರೀ ವನದುರ್ಗಿ ದೈವಸ್ಥಾನ ಸನ್ನಿದಿಗೆ ಬಂದು ಆಣೆ ಪ್ರಮಾಣ ಮಾಡಲಿ. ನಾನು ಕೂಡ ಬರುತ್ತೇನೆ ಎಂದು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿನಯ್ ಕುಮಾರ್ ಕಂದಡ್ಕ ಹೇಳಿದ್ದಾರೆ.

ಸೆ.21ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಳೆದ ಒಂದೂವರೆ ವರ್ಷದಿಂದ ಸುಳ್ಯ ನಗರ ಪಂಚಾಯತ್ ಆಡಳಿತ ಅಧಿಕಾರಿಯಾಗಿ ತಹಶೀಲ್ದಾರ್ ಇದ್ದರು. ಆ ಸಮಯದಲ್ಲಿ ಇವರು ಏನೂ ಮಾತಾಡದವರು ಇದೀಗ ನಗರ ಪಂಚಾಯತ್ ಅಧ್ಯಕ್ಷರು ಆಯ್ಕೆ ಗೊಂಡು ಅಧಿಕಾರಕ್ಕೆ ಬಂದಾಗ ಕಸದ ಸಮಸ್ಯೆಯನ್ನು ದೊಡ್ಡದು ಮಾಡಿ ರಾಜಕೀಯ ದ್ವೇಷ ಮಾಡುವುದು ಇವರ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇವರು ಹೇಳುವ ರೀತಿಯಲ್ಲಿ ಏನೂ ಇಲ್ಲ. ಸುಳ್ಯದ ಜನತೆಗೆ ಸರಿಯಾಗಿ ಗೊತ್ತಿದೆ ನಗರ ಪಂಚಾಯತ್ ನ ಕಸದ ಸಮಸ್ಯೆ ಎಷ್ಟು ಇತ್ತು ಮತ್ತು ಅದು ಎಷ್ಟು ಈಗ ಪರಿಹಾರ ಆಗಿದೆ ಎಂದು. ಆದ್ದರಿಂದ ಈ ಇಬ್ಬರು ವ್ಯಕ್ತಿಗಳಿಂದ ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ. ಇವರು ಎಷ್ಟು ಸಾಚಗಳು ಎಂದು ಕೂಡಾ ನನಗೆ ಗೊತ್ತಿದೆ ಎಂದರು.

ಸುಳ್ಯ ಜಾತ್ರೆ ಸಂದರ್ಭ ಜಾತ್ರಡ್ಕದ ಇವರ ಬಿಲ್ಡಿಂಗ್ ಪಕ್ಕದಲ್ಲಿ ಬಡ ವ್ಯಾಪಾರಿಗಳಿಂದ ಎಷ್ಟು ದುಡ್ಡು ಕೊಳ್ಳೆ ಹೊಡೆಯುತ್ತಾರೆ. ಈ ಭಾಗದಲ್ಲಿ ಕಸದ ನಿರ್ವಹಣೆ ಮಾಡುತ್ತೇವೆ ಎಂದು ಅಲ್ಲಿಯ ಹಳೆಯ ಚಿತ್ರಮಂದಿರದ ಜಾಗವನ್ನು ಜೂಜು ವ್ಯಾಪಾರಕ್ಕೆ ಬಳಸಿ ಹಣ ಮಾಡಿರುವುದು ಇವೆಲ್ಲಾ ನಮಗೆ ತಿಳಿದ ವಿಷಯ. ಅಂತವರಿಂದ ನಾವು ಏನೂ ಕಲಿಯ ಬೇಕಾಗಿಲ್ಲ ಎಂದು ಹೇಳಿದರು.

ಅಶೋಕ್ ಪೀಚೆ ಕಲ್ಲುಚರ್ಪೆ ನಿವಾಸಿಯೇ ಅಲ್ಲ. ಅವರೂ ಕೂಡ ಕಳೆದ ಕೆಲವು ವರ್ಷ ಗಳ ಹಿಂದೆ ಕಲ್ಚರ್ಪೆ ಕಸದ ರಾಶಿಗೆ ಬೆಂಕಿ ಬಿದ್ದ ಮೊದಲ ದಿನ ಅಲ್ಲಿ ಪಂಚಾಯತ್ ವತಿಯಿಂದ ಅಳವಡಿಸಿದ್ದ ಸಿ ಸಿ ಕ್ಯಾಮರವನ್ನು ಬೇರೆಡೆಗೆ ತಿರುಗಿಸಿದವರು. ಅದನ್ನು ಅವರು ಏಕೆ ಮಾಡಿದರು. ಮತ್ತು ಅದರ ಉದ್ಧೇಶ ಏನಾಗಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಇದೀಗ ಪರಿಸರದ ರಸ್ತೆಯಲ್ಲಿ ದೊಡ್ಡ ಬಂಡೆ ಕಲ್ಲು ಇಟ್ಟು ನಕ್ಸ್ಲೈಟ್ ಗಳ ತರ ಮಾಡುವುದು ಎಷ್ಟು ಸರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಇದೆ. ಆದರೆ ಈ ರೀತಿಯ ಕೃತ್ಯಗಳನ್ನು ಮಾಡಿದರೆ ಅಲ್ಲಿರುವ ಸ್ಥಳೀಯರ ಮನೆಯಲ್ಲಿ ಯಾರಿಗಾದ್ರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ತರುವುದು ಹೇಗೆ? ಈ ಬಗ್ಗೆ ಆಲೋಚನೆ ಮಾಡದೆ ಈ ರೀತಿಯ ದುಷ್ಕೃತ್ಯ ಮಾಡಲು ಇವರು ಯಾರು ಎಂದು ಪ್ರಶ್ನಿಸಿದರು.

ಅಲ್ಲಿಯ ನಿವಾಸಿಗಳ ಬಗ್ಗೆ ನಮಗೆ ನೋವು ಇದೆ. ನಾವು ಎಲ್ಲವೂ ಸರಿ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದರೆ ನಾವು ಅವರ ಸಮಸ್ಯೆಗೆ ಸದಾ ಸ್ಪಂದನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅಲ್ಲಿಯ ನಿವಾಸಿಗಳಿಗೆ ಸಮಸ್ಯೆ ಬರದ ರೀತಿಯ ಯೋಜನೆಗಳನ್ನು ರೂಪಿಸಿದ್ದೇವೆ. ಆದಷ್ಟು ಶೀಘ್ರದಲ್ಲಿ ಮಾಡೇ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರುಗಳಾದ ಶಿಲ್ಪಾ ಸುದೇವ್, ಕಿಶೋರಿ ಶೇಟ್, ಸುಶೀಲ ಕಲ್ಲುಮುಟ್ಲು, ಸುಧಾಕರ ಕುರುಂಜಿಭಾಗ್, ಶೀಲಾ ಕುರುಂಜಿ ಇದ್ದರು.