ಪೆರುವಾಜೆ : ಡಾ|ಶಿವರಾಮ ಕಾರಂತ ಸ.ಪ್ರ.ದ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿಣಿ ಸಮಿತಿ ಸಭೆ

0

ನ.9 : ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಹಿರಿಯ ವಿದ್ಯಾರ್ಥಿಗಳ ಸಭೆ

ಬೆಳ್ಳಾರೆ ಡಾ|ಕೆ. ಶಿವರಾಮ ಕಾರಂತ ಸ.ಪ್ರ.ದ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿಗಳ ಸಭೆ ನ.9 ರಂದು ಕಾಲೇಜಿನಲ್ಲಿ ನಡೆಯಲಿದೆ.

ಅ.2 ರಂದು ಸಮಿತಿ ಅಧ್ಯಕ್ಷ ರಕ್ಷಿತ್ ಕುಮಾರ್ ಪೆರುವಾಜೆ ಅವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅನ್ವಯ ದ.ಕ.ಸಹಕಾರ ಸಂಘಗಳ ಕಚೇರಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘವೂ ಅಧಿಕೃತವಾಗಿ ನೋಂದಣಿಯಾಗಿದ್ದು ಮುಂದಿನ ಮೂರು ವರ್ಷ ಅವಧಿಗೆ ನೂತನ ಸಮಿತಿಯು ಹತ್ತಾರು ಕಾರ್ಯಕ್ರಮ ಅನುಷ್ಠಾನಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಇದೇ ವೇಳೆ ಅತ್ಯಂತ ತ್ವರಿತವಾಗಿ ನೋಂದಣಿ ಮಾಡುವಲ್ಲಿ ಸಹಕರಿಸಿದ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಸಿ ಅವರಿಗೆ ಸಂಘದ ಅಧ್ಯಕ್ಷ ರಕ್ಷಿತ್ ಅವರು ಕೃತಜತೆ ಸಲ್ಲಿಸಿದರು.

ಪಿಯು ವಿದ್ಯಾರ್ಥಿಗಳಿಗೆ
ಸ್ಪರ್ಧಾ ಕಾರ್ಯಕ್ರಮ
ಡಿಸೆಂಬರ್ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸ್ಪರ್ಧಾ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಇದರ ರೂಪುರೇಷೆಗಳ ಬಗ್ಗೆ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಅವರ ಅಭಿಪ್ರಾಯ ಸಂಗ್ರಹಿಸಿ ಅಂತಿಮಗೊಳಿಸಲು ಕಾರ್ಯಾಕಾರಿಣಿ ಸಭೆ ತೀರ್ಮಾನಿಸಿತು.

ಸದಸ್ಯರ ಸೇರ್ಪಡೆಗೆ ಆದ್ಯತೆ
1991 ರಂದು ಪ್ರಾರಂಭಗೊಂಡಿರುವ ಬೆಳ್ಳಾರೆ ಸರಕಾರಿ ಪದವಿ ಕಾಲೇಜು 33 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು ಅನೇಕರು ಉನ್ನತ ಸ್ಥಾನಮಾನದಲ್ಲಿಯು ಇದ್ದಾರೆ. ಹೀಗಾಗಿ ಎಲ್ಲ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವುದು, ಇದಕ್ಕಾಗಿ ಆಯಾ ವರ್ಷದ ವಿದ್ಯಾರ್ಥಿಗಳ ಸಹಕಾರ ಪಡೆಯುವುದು, ಸದಸ್ಯತನ ಶುಲ್ಕವಾಗಿ 500 ರೂ. ನಿಗದಿಪಡಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲು ಅವಕಾಶ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳ ಬಗ್ಗೆಯು ಚರ್ಚೆ ನಡೆಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಜನೀಶ್ ಸವಣೂರು, ಖಜಾಂಜಿ ಯಶೋಧ ಪೆರುವಾಜೆ, ಜತೆ ಕಾರ್ಯದರ್ಶಿ ಶಿಲ್ಪ ಕೆ.ಎನ್., ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಡಾ|ಸಂದೀಪ್ ಕುಮಾರ್, ಶಿವಪ್ರಸಾದ್ ಪೆರುವಾಜೆ, ರಂಜಿತ್ ಡಿ, ಕಿರಣ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನುರಾಜ್ ಸಿ.ಬಿ.ಸ್ವಾಗತಿಸಿ, ವಂದಿಸಿದರು.