ಪೆರಾಜೆ: ಪೆರುಮುಂಡದಲ್ಲಿ ಕಾಡುಪ್ರಾಣಿಯ ಬೇಟೆ

0

ಮಾಂಸ ಸೇರಿದಂತೆ ಆರೋಪಿಯನ್ನು ವಶಕ್ಕೆ ಪಡೆದ ಸಂಪಾಜೆ ವಲಯ ಅರಣ್ಯ ಇಲಾಖಾ ಅಧಿಕಾರಿಗಳ ತಂಡ -ಓರ್ವ ಪರಾರಿ

ಕಾಡುಪ್ರಾಣಿಗಳನ್ನು ಭೇಟೆಯಾಡಿ ಮಾಂಸ ಮಾಡಿ ಬೇಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿಗಳ ತಂಡ ಬೇಯಿಸಿದ ಮಾಂಸ ಸೇರಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಓರ್ವ ಆರೋಪಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಅ.23ರಂದು ರಾತ್ರಿ ಪೆರಾಜೆ ಗ್ರಾಮದ ಪೆರುಮುಂಡದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಖಚಿತ ಮಾಹಿತಿ ಪಡೆದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ ಬಿ. ಎಸ್.ಎಫ್.ಎಸ್. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಷಿನ್ ಭಾಷಾ ಅವರ ಮಾರ್ಗದರ್ಶನದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ ಅವರ ಸಮ್ಮುಖದಲ್ಲಿ ಪೆರುಮುಂಡದ ಗಂಗಾಧರ ಅವರ ಮನೆಯಲ್ಲಿ ಅ.24ರಂದು ದಾಳಿ ನಡೆಸಿದಾಗ ಅವರ ಮನೆಯಲ್ಲಿ 10. 302 ಕೆಜಿ ಅಂದಾಜು ಬೇಯಿಸಿದ ಮಾಂಸವನ್ನು ಪತ್ತೆ ಹಚ್ವಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾಧರ ಪೆರುಮುಂಡ ಅವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದು, ಅವರ ಮಗ ಜೀತನ್ ಅವರು ತಪ್ಪಿಸಿ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಸಂಪಾಜೆ ಶಾಖೆಯ ಉಪ ವಲಯಾರಣ್ಯಾಧಿಕಾರಿ ಶ್ರೀಮತಿ ಶ್ರೀರಕ್ಷಾ, ಉಪವಲಯರಣ್ಯಾಧಿಕಾರಿ ವಿಜಯೇಂದ್ರ ಕುಮಾರ್ ಎಂ. , ಗಸ್ತು ಅರಣ್ಯ ಪಾಲಕರಾದ ನಾಗರಾಜ ಎಸ್. ಸತೀಶ್ ಆರ್., ಪುನೀತ್ ಕೆ. ಹಾಗೂ ಸಂಪಾಜೆ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿಗಳು ಭಾಗವಹಿಸಿದ್ದರು.