ರೈತ ಪರ ಹೋರಾಟ ನಡೆಸಿದ ಶಾಸಕರು, ಹೋರಾಟಗಾರರ ಮೇಲಿನ ಕೇಸ್ ಗೆ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ತೀವ್ರವಾಗಿ ಖಂಡನೆ

0

ರೈತರ ಪರವಾಗಿ ನಡೆಸಲಾದ ಪ್ರತಿಭಟನೆಯಲ್ಲಿ ಶಾಸಕರು ಹಾಗೂ ಹೋರಾಟಗಾರರ ಮೇಲೆ ಕೇಸ್ ದಾಖಲು ಮಾಡಿರುವುದನ್ನು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.
ಗುಂಡ್ಯ ಮಾಡದ ವಠಾರದಲ್ಲಿ ನ.16 ರಂದು ಸಭೆ ನಡೆಸಿದ ವೇದಿಕೆಯ ಪ್ರಮುಖರು ಸಭೆಯಲ್ಲಿ ಚರ್ಚೆ ನಡೆಸಿ, ಘಟನೆಯನ್ನು ಖಂಡಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಹೊರ ಜಿಲ್ಲೆಯ ಶಾಸಕರಾದ ಗುರುರಾಜ್ ಗಂಟಿಹೊಳೆ, ಮಂಜುನಾಥ್ ಸಕಲೇಶಪುರ ಬೆಳಗ್ಗೆ 10 ಗಂಟೆಗೆ ಆಗಮಿಸಿ ಕಸ್ತೂರಿ ರಂಗನ್ ವರದಿ ಕೈ ಬಿಡುವಂತೆ, ಜಂಟಿ ಸರ್ವೆ ನಡೆಸಿ ಗಡಿ ಗುರುತು ನಡೆಸಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದ್ದರು. ಪ್ರತಿಭಟನೆಯನ್ನು ಪಕ್ಷಾತೀತ, ಜಾತ್ಯಾತೀತವಾಗಿ ನಡೆಸಲಾಗಿತ್ತು. ಅಪರಾಹ್ನ 3 ಗಂಟೆ ವರೆಗೂ ಉನ್ನತ ಅಧಿಕಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು, ಈ ವೇಳೆ ಘಟನೆ ನಡೆದಿರಬಹುದು, ಆದರೆ ರಸ್ತೆ ತಡೆ ನಡೆಸಿಲ್ಲ, ಈ ವೇಳೆ ಶಾಸಕರು ಅಧಿಕಾರಿಗಳನ್ನು ಮಾತನಾಡಲು ತೆರಳಿದ ವೇಳೆ ಶಾಸಕರ ಮೇಲೆ, ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಿದೆ. ಜನರ ಸಮಸ್ಯೆ ಬಗೆಹರಿಸಲು ಬಂದವರ ಮೇಲೆ ಕೇಸ್ ಮಾಡಿರುವುದು ಖಂಡನೀಯ, ಜನರನ್ನು ಕಾಯಿಸಿರುವುದೂ ಕೂಡ ಖಂಡನೀಯ ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ತಿಳಿಸಿದ್ದಾರೆ.
ಪ್ರಮುಖರಾದ ಗಣೇಶ್ ಅನಿಲ, ಸತೀಶ್ ಎರ್ಕ, ಮುರಳೀಧರ ಎರ್ಮಾಯಿಲ್, ಈಶ್ವರ ಗೌಡ ಆರಂಪಾಡಿ, ಚಿದಾನಂದ ಕಂದಡ್ಕ, ಅಚ್ಚುತ ಸುಬ್ರಹ್ಮಣ್ಯ, ರವಿಚಂದ್ರ ಹರಿಹರ, ಯತೀಶ್ ಹರಿಹರ, ಹಿಮ್ಮತ್ ಹರಿಹರ, ವಿಜಯ ಹರಿಹರ, ಪ್ರಕಾಶ್ ಗುಂಡ್ಯ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.