ಪಂಬೆತ್ತಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರರಿಗೆ ಸೇರಿದ ಜಮೀನನ್ನು ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿರುವುದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನ.30ರಂದು ಸುಳ್ಯ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಹೇಳಿದರು.
ನ.22ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಂಬೆತ್ತಾಡಿ ಗ್ರಾಮದ ಸ.ನಂ. 184/1ಎ ರಲ್ಲಿ 1.36 ಎಕ್ರೆ ಜಮೀನು ಪ.ಜಾತಿಗೆ ಸೇರಿದ ಚಂರ್ಬ ಮೇರ ಎಂಬವರಿಗೆ ಕಡತ ನಂಬ್ರ ಎನ್.ಸಿ.ಆರ್.ಎಸ್.ಆರ್. 506/78-79 ರಂತೆ, 1978ರಲ್ಲಿ ಮಂಜೂರಾಗಿರುತ್ತದೆ.
28.12.1980 ರಂದು ಸಾಗುವಳಿ ಚೀಟು ನೀಡಿ SRT LND: 197/81-82 ರಂತೆ ಪೋಡಿ ವ್ಯವಹರಣೆ ಪೂರ್ಣಗೊಂಡಿದ್ದು, ಪಹಣಿ ದುರಸ್ತಿಯಾಗಿರುತ್ತದೆ. 2005ರಂದು ಚಂರ್ಬ ಮೇರರು ಮೃತಪಟ್ಟಿದ್ದು, ಅವರ ಮಗ ವಾರಸುದಾರರಾಗಿರುತ್ತಾರೆ.
ಈ ಕುರಿತಂತೆ ಮೋನಪ್ಪ ಗೌಡ ಮತ್ತು ಇತರರು NCRSR 83/1991-92 ರಂತೆ 23-03-2013 ರಲ್ಲು, ಸುಳ್ಳು ಮಾಹಿತಿಯನ್ನು ನೀಡಿ ಮೇಲ್ಯಾಣಿಸಿದ ಜಮೀನಿಗೆ ಸಾಗುವಳಿ ಚೀಟಿಯನ್ನು ಪಡೆದಿರುತ್ತಾರೆ.
ಈ ಆದೇಶದ ಮೇಲೆ ಚೋಮ ಮೇರರವರು ಸಹಾಯಕ ಆಯುಕ್ತರು ಪುತ್ತೂರು ಇಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಜಾಗೊಂಡಿರುತ್ತದೆ.
184/1ಎ ರಲ್ಲಿ 138 ಎಕ್ರೆ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಇವರಿಗೆ ಮಂಜೂರಾಗಿದ್ದು, ಪಿ.ಟಿ.ಸಿ.ಎಲ್ ಕಾನೂನಿಗೆ ಅನ್ವಯಿಸುವ ಜಮೀನಾಗಿದ್ದರಿಂದ, ಈ ಜಮೀನನ್ನು ಮೋನಪ್ಪ ಗೌಡ ಮತ್ತು ಇತರರು ಯಾವುದೇ ಕಂದಾಯ ಕಾಯ್ದೆಯಲ್ಲಿ ಮಂಜೂರುಗೊಳಿಸಲು ಅಸಾಧ್ಯವಾಗಿರುತ್ತದೆ.
ಆದ್ದರಿಂದ ಮೋನಪ್ಪ ಗೌಡ ರವರಿಗೆ ಮಂಜೂರಾದ ಸಾಗುವಳಿ ಚೀಟನ್ನು ರದ್ದು ಪಡಿಸಬೇಕಾಗಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ನ.30 ರಂದು ಬೆಳಿಗ್ಗೆ ಯಿಂದ ತಾಲೂಕು ಕಛೇರಿ ಮುಂಭಾಗ ನಿರಂತರವಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ವತಿಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಈ ಅನ್ಯಾಯದ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ರ ಗಮನಕ್ಕೆ ತಂದರೂ ಅವರು ಕೂಡಾ ನಮ್ಮ ಪರವಾಗಿ ನಿಲ್ಲಲಿಲ್ಲ ಎಂದು ಗಿರಿಧರ ನಾಯ್ಕ್ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಂರ್ಬರವರ ಮನೆಯವರಾದ ಅಕ್ಕು, ತಿಮ್ಮಕ್ಕ, ಸುಂದರಿ, ಸದಾನಂದ, ಸುಂದರ, ಗಿರಿಜಾ ಇದ್ದರು.