ಪೇಯ್ಡ್ ನ್ಯೂಸ್‌ನಿಂದ ಪತ್ರಿಕೋದ್ಯಮದ ಪಾವಿತ್ರ್ಯತೆಗೆ ಧಕ್ಕೆ-ಡಾ.ಮೋಹನ್ ಆಳ್ವ

0

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5 ನೇ జిಲ್ಲಾ ಸಮ್ಮೇಳನ ಉದ್ಘಾಟನೆ

ಪೇಯ್ಡ್ ನ್ಯೂಸ್ ಸಂಸ್ಕೃತಿ ಪತ್ರಿಕೋದ್ಯಮದ ಪಾವಿತ್ರ್ಯತೆಗೆ ಧಕ್ಕೆ ತರುವ ಅಪಾಯ ಇದೆ. ಸತ್ಯ ಸಂಗತಿಗಳನ್ನು ಮರೆಮಾಚುವ ಮತ್ತು ಸುಳ್ಳನ್ನು ವೈಭವೀಕರಿಸುವ ಸ್ಥಿತಿ ಉಂಟಾಗಿದೆ ಎಂದು
ಮೂಡಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.


ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ‌ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ జిಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಮಾಜವನ್ನು ಕಟ್ಟುವುದರಲ್ಲಿ ಪತ್ರಕರ್ತರ ಪಾತ್ರ ಬಲು ದೊಡ್ದದು. ಸಮಾಜ ಸುಧಾರಣೆಗೆ ದೊಡ್ಡ ಕೊಡುಗೆ ನೀಡಿದ ಕೀರ್ತಿ ಮಾಧ್ಯಮ ಕ್ಷೇತ್ರಕ್ಕಿದೆ.ಪ್ರಜಾಪ್ರಭುತ್ವದ ಕಾವಲಾಳಾಗಿ ನಿಂತು ದುರ್ಬಲರಿಗೆ, ಅಸಕ್ತರಿಗೆ ಶಕ್ತಿ ತುಂಬಿದೆ. ನಿರಂತರ ಮಾಹಿತಿ‌ ನೀಡಿ, ಜಾಗೃತಿ ಮೂಡಿಸಿ ಸಮಾಜದ ಎಲ್ಲಾ ಕೆಲಸಗಳಿಗೂ ಸಾಥ್ ನೀಡಿದೆ.
ಸಾಮಾಜಿಕ ಮಾಧ್ಯಮಗಳ ಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ನೈತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡುವ ಸ್ಥಿತಿಗೆ ತಲುಪಿದೆ ಎಂದರು. ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಉಳಿಸಿ ಸಾಮಾಜಿಕ ಮೌಲ್ಯಗಳನ್ನು ಪೋಷಿಸಿ ಸಮಾಜವನ್ನು ಬಲಿಷ್ಠವಾಗಿ ಬೆಳೆಸುವ ಜವಾಬ್ದಾರಿ ಯುವ ಸಮೂಹಕ್ಕಿದೆ ಎಂದು ಹೇಳಿದರು.


ಮಾಧ್ಯಮ ಕ್ಷೇತ್ರದಲ್ಲಿ ಸಂಶೋಧನೆಯ ಕೊರತೆ ಇದೆ ಎಂದ ಅವರು ಮೂಗಿನ ನೇರಕ್ಕೆ ವರದಿ ಬಿತ್ತುವ ಸಂಪ್ರದಾಯ ಬಂದಿದೆ. ಇದು ಬದಲಾಗಬೇಕು ಪತ್ರಿಕೋದ್ಯಮದಲ್ಲಿ ಸಂಶೋಧನೆ, ಸಮಗ್ರತೆ ಬರಬೇಕು ಎಂದು ಅವರು ಹೇಳಿದರು. ಪತ್ರಕರ್ತರ ಸಂಘ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮತ್ತು ಸಮಾಜಮುಖಿ ಕೆಲಸ‌ ಮಾಡುತ್ತಿರುವುದು ಸಂತಸದ ವಿಷಯ. ಪತ್ರಕರ್ತರ ಹಾಗೂ ಮಾಧ್ಯಮದ ಮೂಲಕ ಜಿಲ್ಲೆಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಿದೆ ಎಂದು ಡಾ.ಮೋಹನ್ ಆಳ್ವ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಪತ್ರಿಕೋದ್ಯಮದ ಸ್ಥಿತಿ ಹಿಂದಿನ ರೀತಿಯಲ್ಲಿ ಇದೆಯಾ ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ. ತಮ್ಮ ಮಾಧ್ಯಮದ ಮೂಲಕ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ನಡೆಸಬೇಕು. ಬದಲಾವಣೆ ಪಕ್ಕದ ಮನೆಯಿಂದ ಬರುವುದಿಲ್ಲ, ನಮ್ಮ ಮನಸ್ಸಿನಿಂದ ಬರಬೇಕು ಎಂದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಶಿವಸುಬ್ರಮಣ್ಯ ಕೆ ಮಾತನಾಡಿದರು.
ಶಾಸಕ ಡಿ. ವೇದವ್ಯಾಸ ಕಾಮತ್, ಪುಸ್ತಕ ಪ್ರದರ್ಶನ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯನ್ನು ನೆರವೇರಿಸಿದರು.

ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ,
ಮಹಾನಗರ ಪಾಲಿಕೆಯ ಉಪ ಆಯುಕ್ತ ಚಂದ್ರಶೇಖರ ಅತಿಥಿಗಳಾಗಿದ್ದರು. ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್.
ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘದ‌ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ದ.ಕ.ಜಿಲ್ಲಾ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ‌.ಎನ್.ಪುಷ್ಪರಾಜ್
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಆಶಯ ಭಾಷಣ ಮಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘದ‌ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ‌ ನಿರೂಪಿಸಿದರು.