ಅಮರಪಡ್ನೂರು ಗ್ರಾಮದ ಶಿವಪ್ರಸಾದ ಭಟ್ಟ ಚೂಂತಾರುರವರು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡ ಮಾಡಲ್ಪಡುವ ವೇದರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಸಕಲ ಧರ್ಮಗಳಿಗೂ ಮೂಲವೆನಿಸಿರುವ ವೇದವನ್ನೇ ಜೀವನ ಧರ್ಮವಾಗಿ ಪರಿಪಾಲಿಸಿಕೊಂಡು ಬಂದಿರುವ ಚೂಂತಾರು ಮನೆತನದ
ವೇ। ಮೂ। ಕೃಷ್ಣ ಭಟ್ಟ ಮತ್ತು ಶ್ರೀಮತಿ ಪಾರ್ವತಿ ದಂಪತಿಯ ಸುಪುತ್ರರಾಗಿರುವ ಶಿವಪ್ರಸಾದ ಭಟ್ಟ ಚೂಂತಾರುರವರು ಶ್ರೀ ರಾಮಚಂದ್ರಾಪುರ ಮಠ, ಪೆರಾಜೆಯ ಶ್ರೀರಾಮ ಸಂಸ್ಕೃತ ವೇದ ಪಾಠಶಾಲೆಯಲ್ಲಿ ವೇ.ಮೂ. ಮಣಿಮುಂಡ ಮಹಾಲಿಂಗ ಉಪಾಧ್ಯಾಯ ಶಿರೋಮಣಿ ಇವರಿಂದ ಸಂಸ್ಕೃತ ಮತ್ತು ಕೃಷ್ಣ
ಯಜುರ್ವೇದದ ಅಧ್ಯಯನ ಮಾಡಿ ಬಳಿಕ ಪಾರಂಪರಿಕ ಕೃಷಿ ವೃತ್ತಿಯ ಜೊತೆಗೆ ಪೌರೋಹಿತ್ಯವನ್ನು ನಡೆಸಿಕೊಂಡು ಬರುತ್ತಾ ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದಾರೆ. ಸುಮಾರು ಹತ್ತು ವರ್ಷಗಳ ಪರ್ಯಂತ ಪಂಜ ಸೀಮಾ ಹವ್ಯಕ ಮಹಾಸಭಾದ ವತಿಯಿಂದ ನಡೆಸಲಾದ ವಸಂತ ವೇದ ಶಿಬಿರಗಳಲ್ಲಿ ಅಧ್ಯಾಪನವನ್ನು ನಡೆಸಿ ನೂರಾರು ವಟುಗಳಿಗೆ ವೇದ ಮಾರ್ಗದ ಪರಿಚಯವನ್ನು ಮಾಡಿಸಿ 2009ರಲ್ಲಿ ಪ್ರಾರಂಭಿಸಿದ ‘ಸ್ಕಂದ ಕೃಪಾ ಉಚಿತ ವಸಂತ ವೇದ ಮತ್ತು ಯೋಗ ಶಿಬಿರವನ್ನು ನಿರಂತರವಾಗಿ ಯಶಸ್ಸಿನ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ. 2016ರಲ್ಲಿ ನೋಂದಾಯಿತ ಟ್ರಸ್ಟನ್ನು ತಮ್ಮ ತೀರ್ಥರೂಪರ ಹೆಸರಿನಲ್ಲಿ ಸ್ಥಾಪಿಸಿ ಆ ಮೂಲಕ ಇನ್ನಷ್ಟು
ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.
ಡಿ. 27 ರಿಂದ 29 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿಪ್ರಧಾನವಾಗಲಿರುವುದು.