ಪುರೋಹಿತ ನಾಗರಾಜ ಭಟ್ಟರಿಗೆ ಹವ್ಯಕ ವೇದರತ್ನ ಪ್ರಶಸ್ತಿ

0


ಸುಳ್ಯದ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಕರಾದ ಪುರೋಹಿತ ನಾಗರಾಜ ಭಟ್ಟರು ಹವ್ಯಕ ವೇದರತ್ನ ಪ್ರಶಸ್ತಿಗೆ ಭಾಜನರಾಗಿದ್ದು, ದಶಂಬರ ೨೭ ರಿಂದ ೨೯ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಗರಾಜ ಭಟ್ಟರಿಗೆ ಪ್ರಶಸ್ತಿ ಘೋಷಣೆಯಾಗುವ ಮೂಲಕ ಸುಳ್ಯ ತಾಲೂಕಿನ ನಾಲ್ವರು ವೇದರತ್ನ ಪ್ರಶಸ್ತಿ ಲಭಿಸುವಂತಾಗಿದೆ. ಮೂವರ ಹೆಸರನ್ನು ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು.
ಅಖಿಲಭಾರತ ಹವ್ಯಕ ಸಭಾ ಸ್ಥಾಪನೆಯಾಗಿ ೮೧ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ೮೧ ಮಂದಿ ವೇದ ವಿದ್ವಾಂಸರಿಗೆ, ೮೧ ಮಂದಿ ಕೃಷಿ ಸಾಧಕರಿಗೆ, ೮೧ ಮಂದಿ ಕ್ರೀಡಾ ಸಾದಕರಿಗೆ, ಇತರ ಕ್ಷೇತ್ರಗಳ ೮೧ ಮಂದಿ ಸಾಧಕರಿಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗುತ್ತದೆ.


೫೨ ವರ್ಷ ಪ್ರಾಯದ ಪುರೋಹಿತ ನಾಗರಾಜ ಭಟ್‌ರವರು ವಗೆನಾಡು ಗೋಪಾಲಕೃಷ್ಣ ಭಟ್ – ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರ. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಬಳಿಕ ಕೃಷ್ಣ ಯಜುರ್ವೇದ ಮೂಲ ಪಾಠ ( ಪೂರ್ವಾಪರ ಪ್ರಯೋಗ ಸಹಿತ) ವನ್ನು ಬ್ರಹ್ಮಶ್ರೀ ವೇ. ಮೂ. ಕೇಶವ ಜೋಯಿಸ ಕರುವಜೆ ( ಸದಾಶಿವ ವೇದ ಪಾಠಶಾಲೆ, ಬೆಳ್ಳಾರೆ)ಯವರಿಂದ ಪಡೆದರು. ಪುರೋಹಿತ ನಾಗರಾಜ ಭಟ್ಟರು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ೨೫ ವರ್ಷಗಳಿಂದ ಉಪನೀತರಾದ ವಟುಗಳಿಗೆ ಎರಡು ತಿಂಗಳುಗಳ ಕಾಲ ವಸತಿ, ಊಟ ಉಪಾಹಾರ, ವಸ್ತ್ರೋತ್ತರೀಯ, ಪುಸ್ತಕಗಳ ಸಹಿತ ಉಚಿತವಾಗಿ ತನ್ನ ಮನೆಯಲ್ಲಿ ವೇದ-ಯೋಗ-ಕಲಾ ಶಿಬಿರದ ಆಯೋಜನೆ. ವೇದದ ಜೊತೆ ಜೊತೆಗೇ ಯೋಗ, ಜಾದೂ, ಮಿಮಿಕ್ರಿ, ಈಜು, ಭಜನೆ, ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪಾಠ ಏರ್ಪಡಿಸುತ್ತಾರೆ. ಪ್ರತೀ ವರ್ಷ ೨೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಭಾಗಿ ಯಾಗುತ್ತಾರೆ. ಮೂರು ವರ್ಷ ಶಿಬಿರ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಮನೆಯಲ್ಲಿ ವಾರಕ್ಕೊಬ್ಬರಂತೆ ಪ್ರತೀ ವಿದ್ಯಾರ್ಥಿಯ ಮನೆಯಲ್ಲಿ ಸರಣಿ-ಶಿವಪೂಜೆ ಎಂಬ ಪರಿಕಲ್ಪನೆಯಲ್ಲಿ ಕಲಿತ ಪಾಠದ ಪ್ರಾಯೋಗಿಕ ಅಳವಡಿಕೆಗಾಗಿ ಪಂಚಾಯತನ ಶಿವ ಪೂಜೆ ಆಚರಣೆ. ಈವರೆಗೆ ೫೦೦ ಕ್ಕೂ ಹೆಚ್ಚಿನ ಮನೆಗಳಲ್ಲಿ ಆಯೋಜನೆ ಮಾಡಲಾಗುತ್ತದೆ. ಕೇವಲ ಬ್ರಾಹ್ಮಣರಿಗಲ್ಲದೆ ಹಿಂದೂ ಸಮಾಜದ ಪ್ರತೀ ವರ್ಗದವರಿಗೂ ಯಾವುದೇ ಭೇದವಿಲ್ಲದೇ ಭಾರತೀಯ ಸಂಸ್ಕಾರ ನೀಡುವ ಉzಶದಿಂದ ಶ್ಲೋಕ-, ಯೋಗ ಹಾಗೂ ಕಲಾ ಪ್ರಕಾರಗಳನ್ನು ಒಳಗೊಂಡ ಸಂಸ್ಕಾರ- ವಾಹಿನಿ ಕಳೆದ ೧೩ ವರ್ಷಗಳಿಂದ ಉಚಿತವಾಗಿ ಆಯೋಜನೆ ಮಾಡುತ್ತಿದ್ದಾರೆ.


ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ೪೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸನಿವಾಸವಾಗಿ ಗಣಪತಿ ಹೋಮ, ದುರ್ಗಾ ಸಪ್ತಶತೀ ಪಾರಾಯಣ ಸಹಿತ ದುರ್ಗಾ ಪೂಜೆಯ ಪ್ರಯೋಗ ಸಹಿತ ಪಾಠ, ವಿದ್ಯಾರ್ಥಿಗಳಲ್ಲದೆ ಹಿರಿಯರಿಗೂ ರುದ್ರ, ಚಮಕ, ಸಪ್ತಶತೀ ಪಾರಾಯಣದ ಪಾಠ. ೩೦ ಕ್ಕೂ ಹೆಚ್ಚಿನ ಹಿರಿಯರು ಭಾಗಿ.
೬. ಸಮಾಜಕ್ಕೆ ಅತಿವೃಷ್ಟಿ, ಅನಾವೃಷ್ಟಿ, ಮಹಾ ರೋಗ ಇತ್ಯಾದಿ ಆಪತ್ತು ಬಂದೆರಗಿದ ಸಂದರ್ಭದಲ್ಲಿ ಅದರ ನಿವಾರಣೆಗಾಗಿ ಹಾಗೂ ದೇಶಕ್ಕೆ ಉತ್ತಮ ನಾಯಕತ್ವದ ಪ್ರಾಪ್ತಿಗಾಗಿ ತನ್ನದೇ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಹೋಮಗಳನ್ನು ನಿರ್ವಹಿಸಿದ್ದಾರೆ.


ಪುರೋಹಿತ ನಾಗರಾಜ ಭಟ್ಟರ ಪತ್ನಿ ಶ್ರೀಮತಿ ಶ್ರೀದೇವಿ ನಾಗರಾಜ ಭಟ್‌ರವರು ರಾಷ್ಟ್ರ ಸೇವಿಕಾ ಸಮಿತಿ, ಇನ್ನರ್ ವೀಲ್, ಅಂಜನಾದ್ರಿ ಕ್ಷೇತ್ರ ಸಮಿತಿಗಳಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯ ಪುತ್ರ ಶ್ರೀವತ್ಸ ಭಾರದ್ವಾಜ್ ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿ ಕಲ್ಕತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಿರಿಯ ಪುತ್ರ ಶ್ರೀಪಾದ ಭಾರದ್ವಾಜ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.