ಗಾಂಧಿವಾದಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರರ ಜೀವನ ಚರಿತ್ರೆಯ ‘ ಕೊಳಲ ಕೈ ಹಿಡಿದು ‘ ಪುಸ್ತಕದ ಬಿಡುಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಲಕ್ಷ್ಮೀಶ ತೋಳ್ಪಾಡಿಯವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜ.14 ರಂದು ಸುಳ್ಯದಲ್ಲಿ ನಡೆಸಲು ಸಮಾನ ಮನಸ್ಕರ ವೇದಿಕೆಯಾದ ತರುಣ ಸಮಾಜ ಸುಳ್ಯ ನಿರ್ಧರಿಸಿದೆ.
ತರುಣ ಸಮಾಜದ ಅಧ್ಯಕ್ಷ ಎಂ.ಬಿ.ಸದಾಶಿವ, ಮಾಜಿ ಎಂ.ಎಲ್.ಸಿ. ಅಣ್ಣಾ ವಿನಯಚಂದ್ರ, ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು, ಭಾಲಾವಲಿಕರ್ ಸಮಾಜದ ಅಧ್ಯಕ್ಷ ಹೇಮಂತ ಕುಮಾರ್ ಕಂದಡ್ಕ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ರವರಿದ್ದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಸಂಸದ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಲ್.ಶಂಕರ್ ಅಥವಾ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಚ್.ಶಂಕರಮೂರ್ತಿಯವರನ್ನು ಅತಿಥಿಯಾಗಿ ಆಹ್ವಾನಿಸುವುದೆಂದು ನಿರ್ಧರಿಸಲಾಯಿತು. ಪೂರ್ವಭಾವಿಯಾಗಿ ದ.30 ರಂದು ಆಸಕ್ತರ ಇನ್ನೊಂದು ವಿಸ್ತೃತ ಸಭೆ ನಡೆಸಲು ನಿರ್ಧರಿಸಲಾಯಿತು.