ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ. ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ
ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಸದಸ್ಯರು ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಸೂದನ ಈರಪ್ಪ, ಸಿಬ್ಬಂದಿ ಜ್ಯೋತಿ ಅವರುಗಳು ಜೊತೆಯಲ್ಲಿದ್ದು ಹುತಾತ್ಮ ದಿವಿನ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದಿವಿನ್ ಅವರ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಂಗಳವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು, ಬುಧವಾರ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು.
ಬಳಿಕ ದಿವಿನ್ ಅವರ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಕುಶಾಲನಗರದ ಪ್ರಮುಖ ಬೀದಿಯಿಂದ ಮೆರವಣಿಗೆ ಹೊರಟು ಕೂಡಿಗೆ, ಹೆಬ್ಬಾಲೆ ಮಾರ್ಗವಾಗಿ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಲಿಸಿದ್ದು, ನಂತರ ನೇರವಾಗಿ ಮಾಲಂಬಿಯ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು
ಸಾಂಪ್ರದಾಯಿಕ ವಿಧಿ ವಿಧಾನಗಳ ನಂತರ ಮಾಲಂಬಿಯ ಜಮೀನಿನಲ್ಲಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಪಂಚಭೂತಗಳಲ್ಲಿ ಲೀನವಾದರು. ಇದಕ್ಕೂ ಮೊದಲು ಮೇಜರ್ ನಿಖಿಲ್ ಹಾಗೂ ಸುಬೇದಾರ್ ಮಹೇಶ್ ಜಾಧವ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.