ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

0

ಬ್ರಹ್ಮರಥ ಮುಹೂರ್ತ : ರಥ ಮಂದಿರದಿಂದ ರಥ ಬೀದಿಗೆ ಬಂದ ತೇರು

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.16 ರಿಂದ ಜ.21ರ ತನಕ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಜ.10 ರಂದು ಗೊನೆ ಮುಹೂರ್ತ ನಡೆಯಿತು.

ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಪ್ರಾರಂಭದಲ್ಲಿ ಜಲದುರ್ಗಾದೇವಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಮರ್ಪಿಸಿ ಬಳಿಕ ವಾದ್ಯ ವಾಲಗದೊಂದಿಗೆ ದೇವಾಲಯದ ವ್ಯವಸ್ಥಾಪನ‌ ಸಮಿತಿ ಮಾಜಿ‌ ಸದಸ್ಯ ಪಿ.ವೆಂಕಟಕೃಷ್ಣ ರಾವ್ ಅವರ ತೋಟದಲ್ಲಿ ಗೊನೆ ಮುಹೂರ್ತ ನೆರವೇರಿತು. ಪುನಃ ಅಲ್ಲಿಂದ ಗೊನೆಯನ್ನು ದೇವಾಲಯಕ್ಕೆ ತಂದು ವಿಧಿ ವಿಧಾನ‌ ನೆರವೇರಿಸಲಾಯಿತು.

ಬ್ರಹ್ಮರಥ ಮುಹೂರ್ತ
ಸುಮಾರು 100 ವರ್ಷದ ಬಳಿಕ ಪೆರುವಾಜೆ ಜಲದುರ್ಗಾದೇವಿಗೆ ಬಹ್ಮರಥೋತ್ಸವು ಕಳೆದ ವರ್ಷದ‌ ಜಾತ್ರಾ ಅವಧಿಯಲ್ಲಿ ಸಮರ್ಪಣೆಗೊಂಡು‌ ವೈಭವದ ರಥೋತ್ಸವ‌ ನಡೆದಿತ್ತು. ಈ‌ ಬಾರಿ ನೂತನ ಬ್ರಹ್ಮರಥಕ್ಕೆ ಎರಡನೇ‌ ವರ್ಷದ‌ ರಥೋತ್ಸವ. ಜ‌.19 ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಸಲುವಾಗಿ ಬ್ರಹ್ಮರಥವನ್ನು ರಥ ಮಂದಿರದಿಂದ‌ ರಥ ಬೀದಿಗೆ ತರಲು ಬ್ರಹ್ಮರಥ‌ ಮುಹೂರ್ತ ನಡೆಯಿತು. ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಪೂಜಾ ಕಾರ್ಯ ‌ನಡೆಯಿತು. ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ಅವರು ರಥ ಮಂದಿರದಿಂದ ರಥವನ್ನು ಹೊರ ತರಲು ಮಾರ್ಗದರ್ಶನ ನೀಡಿದರು. ನೂರಾರು ಭಕ್ತರು ರಥವನ್ನು ಎಳೆದು ರಥ ಬೀದಿಗೆ‌ ತಂದರು. ಇನ್ನೂ‌ ಮುಂದೆ ಈ ಬ್ರಹ್ಮರಥಕ್ಕೆ ಕೆಂಪು ಹಾಗೂ ಬಿಳಿ ವರ್ಣವನ್ನು ಹೊಂದಿದ ಪತಾಕೆ, ಗೂಡು, ಕೊಡೆ, ಕಲಶ ಅಳವಡಿಕೆ ಸೇರಿದಂತೆ ಸಂಪ್ರದಾಯದಂತೆ ಬ್ರಹ್ಮರಥವನ್ನು ಉತ್ಸವಕ್ಕೆ ಸಜ್ಜುಗೊಳಿಸುವ ಪ್ರಕ್ರಿಯೆ ‌ನಡೆಯುತ್ತದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ‌ಪೂಜಾರಿ ಮುಕ್ಕೂರು, ವ್ಯವಸ್ಥಾಪನ ಸಮಿತಿ ಮಾಜಿ‌ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಉಮೇಶ್ ಕೆಎಂಬಿ, ನಿರಂಜನ‌ ಶೆಟ್ಟಿ ಪಾಲ್ತಾಡಿ, ಮಾಜಿ ಸದಸ್ಯರಾದ ಬೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ ಬಿ, ನಾರಾಯಣ ಕೊಂಡೆಪ್ಪಾಡಿ, ಕಿಶೋರ್ ರಾವ್, ಪಿ.ಜಗನ್ನಾಥ ರೈ, ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ ‌ಪೆರುವಾಜೆ, ಪೆರುವಾಜೆ ಗ್ರಾ.ಪಂ‌‌. ಮಾಜಿ‌ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಸಂಚಾರ ಠಾಣಾ ನಿವೃತ ಎಸ್‌ಐ ವಿಠಲ ಶೆಟ್ಟಿ ಪೆರುವಾಜೆ, ನಿವೃತ್ತ ಎಎಸ್ ಐ ದೇವದಾಸ ಶೆಟ್ಟಿ, ರಾಮಕೃಷ್ಣ ರಾವ್, ದೇವಸ್ಥಾನದ ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.