ವಿದ್ಯೆ ಎನ್ನುವುದು ಸಾಮಾನ್ಯ ಮನುಷ್ಯನನ್ನು ಮೃಗತ್ವದಿಂದ ದೈವತ್ವಕ್ಕೆ ಎತ್ತುವ ಒಂದು ಸಾಧನ. ಶಿಕ್ಷಣ ಸಂಸ್ಥೆಗಳು ಜಾಗೃತ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ, ಜವಾಬ್ದಾರಿಯುತ ನಾಗರಿಕನನ್ನು ಸೃಷ್ಟಿಸುವ
ಮಹತ್ತಾದ ಜವಾಬ್ದಾರಿಯನ್ನು ಹೊಂದಿವೆ. ಪಡೆದಂತಹ ತಿಳುವಳಿಕೆಗಳು ನಡವಳಿಕೆಗಳಾದಾಗ ಶಿಕ್ಷಣ ಸಂಸ್ಥೆಗಳು ಸಾರ್ಥಕತೆಯನ್ನು ಪಡೆಯುತ್ತವೆ.
ಸುಳ್ಯ ಇಂದು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದರೆ ಅದಕ್ಕೆ ಕಾರಣಕರ್ತರು ಸುಳ್ಯದ ಶಿಕ್ಷಣ ಬ್ರಹ್ಮ ಎಂದು ಕರೆಯಲ್ಪಡುವ ಆಧುನಿಕ ಸುಳ್ಯದ ನಿರ್ಮಾತೃ ಪೂಜ್ಯರಾದ ದಿ. ಡಾ.ಕುರುಂಜಿ ವೆಂಕಟರಮಣ ಗೌಡರು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ವೈದ್ಯಕೀಯ ಪದವಿಯವರಿಗೆ ದಣಿವರಿಯದೇ ಶಿಕ್ಷಣ ಸಂಸ್ಥೆಗಳನ್ನು ಒಂದರ ಹಿಂದೆ ಒಂದರಂತೆ ನಿರ್ಮಿಸುತ್ತಾ ಇಡೀ ಜಗತ್ತೇ ಸುಳ್ಯದತ್ತ ತಿರುಗಿ ನೋಡುವ ಹಾಗೆ ಮಾಡಿದ ಕೀರ್ತಿ ಪೂಜ್ಯರಾದ ಕುರುಂಜಿಯವರಿಗೆ ಅಲ್ಲದೇ ಇನ್ಯಾರಿಗೂ ಸಲ್ಲಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ಸುಳ್ಯದ ಆಸುಪಾಸಿನಲ್ಲೆಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದರ ಹಿಂದೆ ಒಂದರಂತೆ ತಲೆ ಎತ್ತುತ್ತಾ ಹೋದಾಗ ಅವುಗಳೆಲ್ಲದರ ಹಿಂದೆ ಪೂಜ್ಯರ ಸಹಬಾಗಿತ್ವ ಇತ್ತು ಎನ್ನುವುದೂ ಅಷ್ಟೇ ಸತ್ಯ.
1990ರ ದಶಕದಲ್ಲಿ ಶಿಕ್ಷಣವು ಆಧುನಿಕರಣಕ್ಕೆ ಒಳಗಾದಾಗ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣದ ಬೇಡಿಕೆಗಳು ಹೆಚ್ಚಾದಾಗ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ 2000ನೇ ಇಸವಿಯಲ್ಲಿ ತಲೆಯೆತ್ತಿದ ಶಿಕ್ಷಣ ಸಂಸ್ಥೆ
ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ. ಅಂದು ರೆ. ಫಾ. ಎಲಿಯಾಸ್ ಡಿ’ ಸೋಜಾ ಹಾಗೂ ಸಮಾನ ಮನಸ್ಕ ಶಿಕ್ಷಣ ಬಂಧುಗಳು ಒಂದೆಡೆ ಸೇರಿ ಸಂಸ್ಥಾಪಿಸಿದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಪ್ರಸ್ತುತ ವರ್ಷ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಮಾರ್ಚ್ 19, 2000 ದಂದು ಶಾಲೆಯ ಶಂಕು ಸ್ಥಾಪನೆ ನೆರವೇರಿ ಫೆಬ್ರವರಿ 17, 2001 ರಿಂದ 36 ವಿದ್ಯಾರ್ಥಿಗಳ ತಂಡದೊಂದಿಗೆ ಪ್ರಾಥಮಿಕ ಹಂತದ ತರಗತಿಗಳು ಪ್ರಾರಂಭವಾಗಿ,
ವರ್ಷದಿಂದ ವರ್ಷಕ್ಕೆ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಂಡ ಕಾರಣ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಏರುತ್ತಾ ಹೋಗಿ, 2013ರಲ್ಲಿ ಪ್ರೌಢಶಾಲಾ ಶಿಕ್ಷಣಕ್ಕೆ ಅಡಿಪಾಯ ಹಾಕಲಾಯಿತು. ಇದೀಗ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗೆ 1419 ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿರುವುದು ಸಂಸ್ಥೆಯ ಶ್ರೇಷ್ಟತೆಗೆ ಹಿಡಿದ ಕೈಗನ್ನಡಿ.
ದಶಮಾನೋತ್ಸವ, ಬೆಳ್ಳಿ ಹಬ್ಬ ಸುವರ್ಣ ಮಹೋತ್ಸವ,ಷಷ್ಟ್ಯಬ್ದ, ಅಮೃತ ಮಹೋತ್ಸವ, ಶತಮಾನೋತ್ಸವಗಳು ಯಾವುದೇ ಸಂಸ್ಥೆಗೆ ಮೈಲಿಗಲ್ಲುಗಳು. ದೂರಾಲೋಚನೆಯನ್ನು, ದೂರದೃಷ್ಟಿತ್ವವನ್ನು ಇಟ್ಟುಕೊಂಡು ಅದೇ ಮಾರ್ಗದಲ್ಲಿ ನಡೆಯುವ ಸಂಸ್ಥೆಗಳು ಈ ಎಲ್ಲಾ ಮೈಲಿಗಲ್ಲುಗಳನ್ನು ಹಂತ ಹಂತವಾಗಿ ಪೂರೈಸುತ್ತವೆ.
ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಸೈಂಟ್ ಜೋಸೆಫ್ ಸಂಸ್ಥೆ ರಜತ ಮಹೋತ್ಸವದತ್ತ ದಾಪುಗಾಲು ಇಟ್ಟಿದೆ ಎಂದರೆ ಅದಕ್ಕೆ ಕಾರಣ ಅದು ನೀಡುತ್ತಿರುವ ಮೌಲ್ಯಯುತ ಶಿಕ್ಷಣ. ಉತ್ತಮವಾದ ಆಡಳಿತ ಮಂಡಳಿಯೊಂದಿಗೆ, ಅರ್ಪಣಾ ಮನೋಭಾವದ ಶಿಕ್ಷಕ – ಶಿಕ್ಷಕೇತರ ವೃಂದದವರು, ಪ್ರೋತ್ಸಾಹಿಸುವ ಪೋಷಕ ಬಂಧುಗಳು, ಜ್ಞಾನಾರ್ಜನೆ ಗೈಯುತ್ತಿರುವ ಶಿಕ್ಷಣಾರ್ಥಿಗಳು.
ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮೇಲುಗೈ ಸಾಧಿಸುತ್ತಿರುವುದು ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಯನ್ನು ಸೂಚಿಸುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವುದು
ಪ್ರತಿಭೆಗಳ ಹಿಂದೆ ಸಂಸ್ಥೆ ನಿಂತಿದೆ ಎನ್ನುವುದಕ್ಕೆ ಸಾಕ್ಷಿ.
ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಯಾಂತ್ರಿಕವಾಗಿ ಸ್ಪರ್ಧಾತ್ಮಕ
ಯುಗದಲ್ಲಿರುವ ಇಂದಿನ ದಿನಗಳಲ್ಲಿ ಜಾಗತಿಕವಾಗಿ ಸಂಪರ್ಕ ಭಾಷೆಯಾಗಿ ಆಂಗ್ಲ ಮಾಧ್ಯಮದ ಅಗತ್ಯ ಗ್ರಾಮೀಣ ಭಾಗದಲ್ಲಿ ತಲೆದೋರಿದಾಗ ಅದೇ ಮಾದರಿಯಲ್ಲಿ ತಲೆಯೆತ್ತಿದ ಸೈಂಟ್ ಜೋಸೆಫ್ ಶಾಲೆ ಅಂದಿನಿಂದ ಇಂದಿನವರೆಗೆ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶಿಕ್ಷಣ ಸಂಸ್ಥೆಗಳೆಂದರೆ ಅದು ಮಂದಿರ, ಮಸೀದಿ, ಚರ್ಚ್, ಬಸದಿ, ಸ್ತೂಪಗಳಿಗಿಂತ ಶ್ರೇಷ್ಠ. ಯಾಕೆಂದರೆ ಇಲ್ಲಿ ಎಲ್ಲ ವರ್ಗದ ಜನರು ಜಾತಿ, ಮತ, ಪಂಥ ಮರೆತು ವ್ಯಾಸಂಗ ನಿರತರಾಗುತ್ತಾರೆ. ಅದರಲ್ಲಿ ಸೈಂಟ್ ಜೋಸೆಫ್ ಸಂಸ್ಥೆ ಇನ್ನೂ ಭಿನ್ನವಾಗಿ ಗುರುತಿಸಲ್ಪಡುತ್ತದೆ. ಇಲ್ಲಿ ಎಲ್ಲಾ ವರ್ಗದ ಜನರು ಶಿಕ್ಷಣಾರ್ಥಿಗಳಾಗಿದ್ದು, ಸರ್ವಧರ್ಮ ಸಮನ್ವಯದ ರೀತಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ ಎಂದರೂ ತಪ್ಪಾಗಲಾರದು. ಶಿಕ್ಷಣ ಎಲ್ಲರಿಗೂ ಒಂದೇ, ಅದರೊಂದಿಗೆ ಎಲ್ಲಾ ಆಚಾರ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಕೃಷ್ಣ ಜನ್ಮಾಷ್ಟಮಿ, ದೀಪಾವಳಿ, ಕ್ರಿಸ್ಮಸ್, ಈದ್ ಮಿಲಾದ್ ಹಬ್ಬಗಳನ್ನು ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎಂದು ಸಾರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ವಿಚಾರ.
25 ವರ್ಷಗಳಲ್ಲಿ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದು ಬದುಕು ಕಟ್ಟಿಕೊಂಡವರು ಹಲವು ಮಂದಿ. ವೈದ್ಯರಾಗಿ, ಶಿಕ್ಷಕರಾಗಿ, ಬ್ಯಾಂಕ್ ಉದ್ಯೋಗಿಗಳಾಗಿ, ವ್ಯವಹಾರಿಕವಾಗಿ ಹೀಗೆ ಬೇರೆ ಬೇರೆ ಸ್ತರಗಳಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಎಂತಹ ಶಿಕ್ಷಣ ನೀಡುತ್ತೇವೆಯೋ ಅದರ ಮೇಲೆ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅವರೇ ಸಂಸ್ಥೆಯ ಬೆಳವಣಿಗೆಯ ಹಿಂದಿನ ರೂವಾರಿಗಳು.
ಆಡಳಿತ ಮಂಡಳಿಗಳು ಸಂಸ್ಥೆಗೆ ಸಾರಥಿ ಇದ್ದಹಾಗೆ. ವಾಹನವನ್ನು ಚಲಾಯಿಸಲು ನುರಿತ ಚಾಲಕ ಎಷ್ಟು ಮುಖ್ಯವೋ, ಸಂಸ್ಥೆಗೆ ಆಡಳಿತ ಮಂಡಳಿ ಅಷ್ಟೇ ಶ್ರೇಷ್ಠ. ಚಾಲಕ ವಾಹನವನ್ನು ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗೇನೇ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಡೀ ಸಂಸ್ಥೆಯ ಭವಿಷ್ಯ ಆಡಳಿತ ಮಂಡಳಿಯ ಮೇಲೆ ನಿಂತಿರುತ್ತದೆ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು, ಪೋಷಕರನ್ನು ಸಮನ್ವಯತೆಯಿಂದ ಕೊಂಡು ಹೋಗಿ ಸಂಸ್ಥೆಯನ್ನು ಕಟ್ಟುವ ಮಹತ್ತರ ಜವಾಬ್ದಾರಿ ಅವರದು. ಆ ನಿಟ್ಟಿನಲ್ಲಿ ಇದುವರೆಗೆ ಆರು ಮಂದಿ ಸಂಚಾಲಕರು ಈ ಸಂಸ್ಥೆಯ ಸಾರಥ್ಯವನ್ನು ವಹಿಸಿದ್ದು, ಉತ್ತಮವಾದ ಮಾರ್ಗದರ್ಶನೊಂದಿಗೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಆರು ಮಂದಿ ಮುಖ್ಯೋಪಾಧ್ಯಾಯರು ಸಂಸ್ಥೆಯನ್ನು ಮುನ್ನಡೆಸಿದ್ದು,
ಉತ್ತಮ ಶಿಕ್ಷಕ ವೃಂದದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಗುರು ಶಿಷ್ಯ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ.
ಇದೆಲ್ಲದಕ್ಕೂ ಸಾಕ್ಷಿಯೆಂಬಂತೆ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುವುದರೊಂದಿಗೆ ಆಶಾದಾಯಕ ಬೆಳವಣಿಗೆಯನ್ನು ಕಾಣುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಾ,, ಭವಿಷ್ಯದ ಶ್ರೇಷ್ಠ ಮಾದರಿ ಶಿಕ್ಷಣ ಸಂಸ್ಥೆಯಾಗುವುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯು ಇದೇ ರೀತಿ ದಾಪುಗಾಲಿಡುತ್ತಾ ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವವನ್ನು ಆಚರಿಸಿ ಮುನ್ನಡೆಯಲಿ ಎಂಬುದೇ ನಮ್ಮೆಲ್ಲರ ಆಶಯ.
ಡಾ. ಅನುರಾಧಾ ಕುರುಂಜಿ ಪ್ರಧಾನ ಕಾರ್ಯದರ್ಶಿಗಳು ರಜತ ಮಹೋತ್ಸವ ಸಮಿತಿ
ಹಾಗೂ ಪೂರ್ವಾಧ್ಯಕ್ಷರು, ಶಾಲಾ ರಕ್ಷಕ – ಶಿಕ್ಷಕ ಸಂಘ