ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ದರ ಏರಿಕೆಗೆ ಅಧಿವೇಶನದಲ್ಲಿ ಪ್ರಸ್ತಾಪ: ಕು.ಭಾಗೀರಥಿ ಮುರುಳ್ಯ
ಒಕ್ಕೂಟಕ್ಕೆ ಹಾಲಿನ ಬೇಡಿಕೆ ಇದೆ.ಗುಣಮಟ್ಟದ ಹಾಲು ಪೂರೈಸುವಂತಾಗಬೇಕು ; ಕೆ.ಪಿ.ಸುಚರಿತ ಶೆಟ್ಟಿ


ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ ಸಾಗಿಸುವವರು ಹಲವಾರು ಮಂದಿ ಇದ್ದಾರೆ. ಹೈನುಗಾರಿಕಾ ವೃತ್ತಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕದಂತಾಗುತ್ತದೆ.ಒಂದು ಮನೆಯಲ್ಲಿ ಕನಿಷ್ಠ ಒಂದು ಕರುವನ್ನಾದರೂ ಸಾಕುವ ಕೆಲಸ ಮಾಡಬೇಕು.ಸರಕಾರ ಈಗಾಗಲೇ ಪಶು ಸಖಿಯರನ್ನು ನೇಮಕ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಹೆಚ್ಚಿನ ಪ್ರೋತ್ಸಾಹ ಧನ ಮತ್ತು ಹಾಲಿಗೆ ದರ ಏರಿಸುವ ಬಗ್ಗೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸಮಾಡುತ್ತೇನೆ.ಬೆಳ್ಳಿಹಬ್ಬವನ್ನು ಆಚರಿಸಿದ ಎಡಮಂಗಲ ಹಾಲು ಸೊಸೈಟಿ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಹೇಳಿದರು.

ಅವರು ಇಂದು (ಜ.30) ಎಡಮಂಗಲ ದೇವಸ್ಥಾನದ ಸಭಾಭವನದಲ್ಲಿ ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬ ಮತ್ತು ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರ ತಳಿ ಹೆಣ್ಣುಕರುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ ಈ ಕಾರ್ಯಕ್ರಮ ಧಾರ್ಮಿಕ, ಸಾಂಸ್ಕೃತಿಕ ಹಬ್ಬವಾಗಿದೆ.

ಸಮೃದ್ಧವಾದ ಹಸುವನ್ನು ಸಾಕಿ ದ.ಕ.ಜಿಲ್ಲಾ ಒಕ್ಕೂಟಕ್ಕೆ ಉತ್ತಮ ಗುಣ್ಣಮಟ್ಟದ ಹಾಲು ಪೂರೈಸುವಂತಾಗಬೇಕು.ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ರೈತರು ಹಸು ಸಾಕಲು ಹಿಂಜರಿಯುತ್ತಾರೆ.ಸರಕಾರ ಹಾಲಿನ ದರವನ್ನು ರೂ 50ಕ್ಕೆ ಏರಿಸಬೇಕು. ಎಂದ ಅವರು ಒಕ್ಕೂಟದೊಂದಿಗೆ ಸಂಘ ಸಂಸ್ಥೆ ಸೇರಿದಾಗ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತದೆ.ಸಾತ್ವಿಕವಾದ ಹಾಲನ್ನು ಕುಡಿದು ಪ್ರಪಂಚವನ್ನು ಜಯಿಸಿದ ಭಗವಂತನ ರೀತಿಯಲ್ಲಿ ನಾವೆಲ್ಲ ಯಶಸ್ವಿಯಾಗಬೇಕು ಎಂದು ಹೇಳಿದರು.

ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ ದ.ಕ.ಜಿಲ್ಲೆಯಲ್ಲಿ ಹಾಲಿಗೆ ಬೇಡಿಕೆ ಇದೆ. ನಾವು ಹೊರ ಜಿಲ್ಲೆಗಳಿಂದ ತರಿಸಿಕೊಳ್ಳುತ್ತಿದ್ದೇವೆ.ಸರಕಾರ ಪ್ರೋತ್ಸಾಹ ಧನ ಮತ್ತು ಬೆಲೆ ಏರಿಕೆ ಮಾಡಬೇಕು ಹೈನುಗಾರನಿಗೆ ಸಹಾಯ ಮಾಡಬೇಕು.ಪುತ್ತೂರಿನ ಪಡೀಲ್ ನಲ್ಲಿ 10ಎಕ್ರೆ ಜಾಗದಲ್ಲಿ ಒಕ್ಕೂಟದ ಕಚೇರಿ ತೆರೆಯಲು ಜಾಗ ಮಂಜೂರಾಗಿದೆ.ಇದರಿಂದ ರೈತರಿಗೆ ಅನುಕೂಲವಾಗಲಿದೆ.ಯುವಶಕ್ತಿ ಕೂಡ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ವಹಿಸಿದ್ದರು.
ದ.ಕ.ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ,ನಾರಾಯಣ ಪ್ರಕಾಶ್ ಕೆ., ಶ್ರೀಮತಿ ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕಾ ನಿರ್ದೇಶಕರಾದ ವಿವೇಕ್ ಡಿ., ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು,ಎಡಮಂಗಲ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಶ್ರೀ ಹರಿ ನೂಚಿಲ, ಮಂಗಳೂರು ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿ (ಆಡಳಿತ) ವಸಂತಕುಮಾರ್ ಶೆಟ್ಟಿ, ಮಾತನಾಡಿದರು.
ದ.ಕ.ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಸುಳ್ಯ ಇದರ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು,ದ.ಕ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಸಚಿನ್, ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ.ಎಸ್.,ಪ್ರಗತಿಪರ ಕೃಷಿಕರಾದ ಶ್ರೀಮತಿ ಮಹಾದೇವಿ ಎಸ್.ಎಸ್., ಚಂದ್ರಶೇಖರ ಗೌಡ ಮರಕ್ಕಡ, ರಮೇಶ್ ಕೋಟೆ, ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಎಂ.ಬಿ., ದೋಳ್ಪಾಡಿ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ ಗೌಡ ,ಎಡಮಂಗಲ ಹಾಲು ಉತ್ಪಾದಕರ ಸ.ಸಂಘದ ಉಪಾಧಕ್ಷ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದ ಶ್ರೀಮತಿ ವೇದಾವತಿ ಸದಾನಂದ ಗೌಡ ಮೂಲಂಗೇರಿ, ದ್ವಿತೀಯ ಬಹುಮಾನ ಪಡೆದ ಶಿವರಾಮ ಗೌಡ ದೋಳ್ಪಾಡಿ, ತೃತೀಯ ಸ್ಥಾನ ಪಡೆದ ಪೊಯ್ಯೆತ್ತೂರು ವೆಂಕಪ್ಪ ರೈ ಯವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಹಾಗೂ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ.ನಿತೀನ್ ಪ್ರಭು ಸುಳ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಸ್ವಾಗತಿಸಿದರು, ಕಾರ್ಯದರ್ಶಿ ಮಾಧವ ವೈ ವರದಿ ವಾಚಿಸಿದರು, ನಿರ್ದೇಶಕರಾದ ಬಾಲಕೃಷ್ಣ ಕೆ.ಹೇಮಳ ವಂದಿಸಿದರು, ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಮಿಶ್ರ ಹೆಣ್ಣು ಕರುಗಳ ಸ್ಪರ್ಧೆಯಲ್ಲಿ ಭಾಗವಹಿಸಿದ ಹಸು ಕರುಗಳ ಪ್ರದರ್ಶನ ಗಮನಸೆಳೆಯಿತು.